ಮುಂಬೈ ಎಟಿಎಸ್ ಅಧಿಕಾರಿಗಳು ನನಗೆ ಚಿತ್ರಹಿಂಸೆ ನೀಡಿದ್ದರು: ಪ್ರಜ್ಞಾ ಸಿಂಗ್ ಠಾಕೂರ್

ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ನಾನು ಮತ್ತು ನನ್ನ ಕುಟುಂಬಸ್ಥರು ಉತ್ತಮವಾದ ನಂಟು ಹೊಂದಿದ್ದರಿಂದಾಗಿ ಸುಳ್ಳು ಪ್ರಕರಣಗಳಲ್ಲಿ ನನ್ನನ್ನು ಗುರಿ ಮಾಡಲಾಗಿತ್ತು ಎಂದು ಸಾಧ್ವಿ ಪ್ರಜ್ಞಾ ಸಿಂಗ್...
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್
ಭೋಪಾಲ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ನಾನು ಮತ್ತು ನನ್ನ ಕುಟುಂಬಸ್ಥರು ಉತ್ತಮವಾದ ನಂಟು ಹೊಂದಿದ್ದರಿಂದಾಗಿ ಸುಳ್ಳು ಪ್ರಕರಣಗಳಲ್ಲಿ ನನ್ನನ್ನು ಗುರಿ ಮಾಡಲಾಗಿತ್ತು ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಹೇಳಿದ್ದಾರೆ. 
2008ರ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಸಾಧ್ವಿ ಪ್ರಜ್ಞಾ ಠಾಕೂರ್ ಅವರಿಗೆ ಕೆಲ ದಿನಗಳ ಹಿಂದಷ್ಟೇ ಬಾಂಬೇ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. 
ಜಾಮೀನು ಪಡೆದುಕೊಂಡು ಬಿಡುಗಡೆಯಾದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ಆರ್'ಎಸ್ಎಸ್ ಸಂಘಟನೆಯೊಂದಿಗೆ ನಾನು ಮತ್ತು ನನ್ನ ಕುಟುಂಬಸ್ಥರು ಉತ್ತಮ ಸಂಬಂಧ ಹೊಂದಿದ್ದರಿಂದಾಗಿ ಸುಳ್ಳು ಪ್ರಕರಣಗಳಲ್ಲಿ ನನ್ನನ್ನು ಗುರಿ ಮಾಡಲಾಗಿತ್ತು. 2008ರಲ್ಲಿ 24 ದಿನಗಳ ಕಾಲ ವಶದಲ್ಲಿರಿಸಿಕೊಂಡಿದ್ದ ಎಟಿಎಸ್ ಅಧಿಕಾರಿಗಳು ನನಗೆ ಹೇಗೆಲ್ಲಾ ಹಿಂಸೆ ನೀಡಿದ್ದರು ಎಂಬುದನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 
ಎಟಿಎಸ್ ಅಧಿಕಾರಿಗಳು 2008ರ ಅಕ್ಟೋಬರ್ ತಿಂಗಳಿನಲ್ಲಿ ಸೂರತ್ ನಲ್ಲಿ ನನ್ನನ್ನು ಬಂಧನಕ್ಕೊಳಪಡಿಸಿದ್ದರು. ನಂತರ ವಿಚಾರಣೆಗಾಗಿ ಮುಂಬೈಗೆ ಕರೆ ತಂದಿದ್ದರು. ಆರಂಭಿಕ 13 ದಿನಗಳ ಕಾಲ ನನ್ನನ್ನು ಅಕ್ರಮವಾಗಿ ವಶದಲ್ಲಿರಿಸಿಕೊಂಡಿದ್ದರು. ನಂತರದ 11 ದಿನಗಳು ಕಾನೂನಾತ್ಮಕವಾಗಿ ವಶದಲ್ಲಿರಿಸಿಕೊಂಡಿದ್ದರು. 
24 ದಿನಗಳು ನಾನು ನೀರಿನಿಂದ ಬದುಕಿದ್ದೆ. ವಶದಲ್ಲಿದ್ದಷ್ಟು ದಿನ ನನಗೆ ಚಿತ್ರಹಿಂಸೆ ನೀಡಿದ್ದರು. ಪ್ರತೀ ದಿನ ಹೊಡೆಯುತ್ತಿದ್ದರು. ನನ್ನ ಕೈಗಳು ಹಾಗೂ ಬೆರಳುಗಳು ಊದಿಕೊಂಡಿಯೇ ಇರುತ್ತಿತ್ತು. ಎಟಿಎಸ್ ನಲ್ಲಿದ್ದ ವ್ಯಕ್ತಿಯೊಬ್ಬ ನನಗೆ ಬೆಚ್ಚಗಿನ ನೀರು ಕೊಟ್ಟು ಅದರಲ್ಲಿ ಕೈಗಳನ್ನು ಇಡುವಂತೆ ಹೇಳುತ್ತಿದ್ದ. ಇದರಿಂದ ಊತ ಕಡಿಮೆಯಾಗುತ್ತಿತ್ತು ಎಂದು ಹೇಳಿದ್ದಾರೆ. 
ವಿಚಾರಣೆ ವೇಳೆ ಅಧಿಕಾರಿಗಳು ಮಲೆಗಾಂವ್ ನಲ್ಲಿ ಯಾವ ಕಾರಣಕ್ಕೆ ಸ್ಫೋಟ ನಡೆಸಲಾಗಿತ್ತು ಎಂದೇ ಕೇಳುತ್ತಿದ್ದು. ಸ್ಫೋಟದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದೆ. ಸ್ಫೋಟ ಪ್ರಕರಣದಲ್ಲಿ ನನ್ನನ್ನು ಪ್ರಮುಖ ಆರೋಪಿಯಾಗಿ ಮಾಡಬೇಕೆಂದು ಬಯಸಿದ್ದ ಅಧಿಕಾರಿಗಳು ಚಿತ್ರ ಹಿಂಸೆ ನೀಡಿ ಒಪ್ಪಿಕೊಳ್ಳುವಂತೆ ಮಾಡಲು ಪ್ರಯತ್ನ ಮಾಡುತ್ತಿದ್ದರು. 
ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳು ಕಾಂಗ್ರೆಸ್ ಹಾಗೂ ಯುಪಿಎ ಸರ್ಕಾರ ಪರವಾಗಿ ಕೆಲಸ ಮಾಡುತ್ತಿದ್ದರು. ಆರ್'ಎಸ್ಎಸ್ ದೇಶಕ್ಕೆ ನರೇಂದ್ರ ಮೋದಿಯಂತಹ ರಾಷ್ಟ್ರೀಯ ನಾಯಕರನ್ನು ನೀಡಿದೆ ಎಂದು ತಿಳಿಸಿದ್ದಾರೆ. 
ನನ್ನ ವಿರುದ್ಧ ನಡೆದಿರುವ ಸಂಪೂರ್ಣ ಪಿತೂರಿ ಹಿಂದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಇದ್ದಾರೆ. ದಿಗ್ವಿಜಯ್ ಸಿಂಗ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ನಾನು ಎಬಿವಿಪಿಯ ವಿದ್ಯಾರ್ಥಿಗಳ ನಾಯಕಿಯಾಗಿದ್ದೆ. ಪ್ರತೀ ನಿತ್ಯ ದಿಗ್ವಿಜಯ್ ಸಿಂಗ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೆ. ಎಂದಿಗೂ ಸರ್ಕಾರದ ಬಗ್ಗೆ ರಾಜಿಯಾಗಿರಲಿಲ್ಲ. ಹೀಗಾಗಿಯೇ ನನ್ನ ವಿರುದ್ಧ ಪಿತೂರಿ ನಡೆಸಲಾಗಿತ್ತು. 
ಮೂರು ತಿಂಗಳ ಹಿಂದೆ ಮಧ್ಯಪ್ರದೇಶ ದಿನದಂದು ನನ್ನ ವಿರುದ್ಧ ಕೊಲೆ ಪ್ರಕರಣವೊಂದನ್ನು ದಾಖಲು ಮಾಡಲಾಗಿತ್ತು. ನನ್ನ ಪಾತ್ರವೇ ಇಲ್ಲದಿದ್ದರೂ ಪ್ರಕರಣದಲ್ಲಿ ನನ್ನ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಮುಂಬೈ ಆಸ್ಪತ್ರೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಯ ಸಿಬ್ಬಂದಿಗಳ ಬಳಿ ಹೇಳಿಕೊಂಡಿದ್ದೆ. ಕೇಂದ್ರ ಸರ್ಕಾರ ಭಾಗಿಯಾಗಿಲ್ಲ ಎಂದಾದರೆ, ನನ್ನ ವಿರುದ್ಧ ತನಿಖಾ ಸಂಸ್ಥೆ ತನಿಖೆ ಹೇಗೆ ನಡೆಸುತ್ತಿತ್ತು ಎಂದು ಪ್ರಶ್ನಿಸಿದ್ದಾರೆ. 
ಇನ್ನು ಪ್ರಜ್ಞಾ ಸಿಂಗ್ ಅವರು ಈ ಆರೋಪವನ್ನು ಕಾಂಗ್ರೆಸ್ ವಕ್ತಾರ ಕೆ.ಕೆ. ಮುಶ್ರಾ ಅವರು ತಳ್ಳಿಹಾಕಿದ್ದಾರೆ. ಪ್ರಜ್ಞಾ ಸಿಂಗ್ ಅವರು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸ್ಫೋಟ ಪ್ರಕರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com