ಬಿಲ್ಕಿಸ್ ಬನೊ ಕೇಸ್: 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಖಾಯಂ: ಮರಣ ದಂಡನೆ ಕೋರಿದ್ದ ಸಿಬಿಐ ಅರ್ಜಿ ವಜಾ

ಗುಜರಾತ್ ನಲ್ಲಿ ನಡೆದಿದ್ದ ಬಿಲ್ಕಿಸ್ ಬನೋ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಬಾಂಬೆ ಹೈಕೋರ್ಟ್ 11 ಅಪರಾಧಿಗಳ ಜೀವಾವಧಿ ಶಿಕ್ಷೆಯ ತೀರ್ಪನ್ನು ...
ಬಿಲ್ಕಿಸ್ ಬನೊ
ಬಿಲ್ಕಿಸ್ ಬನೊ
ಮುಂಬಯಿ: 2002ರ ಮಾರ್ಚ್ ತಿಂಗಳಿನಲ್ಲಿ  ಗುಜರಾತ್ ನಲ್ಲಿ ನಡೆದಿದ್ದ  ಬಿಲ್ಕಿಸ್ ಬನೋ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಬಾಂಬೆ ಹೈಕೋರ್ಟ್ 11 ಅಪರಾಧಿಗಳ ಜೀವಾವಧಿ ಶಿಕ್ಷೆ ತೀರ್ಪನ್ನು ಎತ್ತಿ ಹಿಡಿದಿದೆ. ಮರಣ ದಂಡನೆ ಕೋರಿದ್ದ ಸಿಬಿಐ ಅರ್ಜಿಯನ್ನು ವಜಾಗೊಳಿಸಿದೆ.
ಇದೇ ಕೇಸಿಗೆ ಸಂಬಂಧಿಸಿದಂತೆ ಐವರು ಪೋಲೀಸರನ್ನು ಖುಲಾಸೆಗೊಳಿಸಿದ್ದ ಆದೇಶವನ್ನು ತಡೆ ಹಿಡಿದಿರುವ ನ್ಯಾಯಾಲಯ, ಅವರ ವಿರುದ್ಧ ತನಿಖೆ ನಡೆಸುವಂತೆ ಸಿಬಿಐ ಗೆ ಆದೇಶಿಸಿದೆ. 11 ಅಪರಾಧಿಗಳ ಪೈಕಿ ಮೂವರಿಗೆ  ಗಲ್ಲು ಶಿಕ್ಷೆ ವಿಧಿಸುವಂತೆ ಸಿಬಿಐ ಬಾಂಬೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ಪ್ರಕರಣದ ಹಿನ್ನೆಲೆ: 2002ರ ಗುಜರಾತ್ ದೊಂಬಿಯಲ್ಲಿ  19 ವರ್ಷದ  5 ತಿಂಗಳ ಗರ್ಭಿಣಿ ಬಿಲ್ಕಿಸ್ ಬನೋ ಮತ್ತು ಆಕೆಯ ಸಹೋದರಿ ಮತ್ತು ತಾಯಿಯಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಜೊತೆಗೆ ಆಕೆಯ ಕುಟುಂಬದ 14 ಮಂದಿಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು, ಇದರಲ್ಲಿ ಬಿಲ್ಕಿಸ್ ಬನೋ ಮೂರು ವರ್ಷದ ಮಗಳನ್ನು ಹತ್ಯೆ ಮಾಡಲಾಗಿತ್ತು.
ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು, 11 ಅಪರಾಧಿಗಳಲ್ಲಿ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಮುಂಬಯಿ ವಿಚಾರಣಾ ನ್ಯಾಯಾಲಯಕ್ಕೆ ಸಿಬಿಐ ಮನವಿ ಸಲ್ಲಿಸಿತ್ತು, ಆದರೆ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಬಾಂಬೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ.
ಸೆಂಟ್ರಲ್ ಗುಜರಾತ್ ನಲ್ಲಿ ನೆಲೆಸಿದ್ದ ಬಿಲ್ಕಿಸ್ ಬನೋ ಮತ್ತು ಆಕೆಯ ಪತಿ ಅತ್ಯಾಚಾರಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದರು. ಈ ಸಂಬಂಧ ಗುಜರಾತ್ ನಲ್ಲಿ ಕೇಸು ದಾಖಲಿಸಲಾಗಿತ್ತು, ಆದರೆ ಅಲ್ಲಿ ವಿಚಾರಣೆ ನಡೆದರೇ ಸಾಕ್ಷ್ಯಗಳು ನಾಶವಾಗುವ ಸಾಧ್ಯತೆಯಿದೆ ಎಂಬ ಶಂಕೆಯ ಮೇಲೆ ಪ್ರಕರಣವನ್ನು ಗುಜರಾತ್ ನಿಂದ ಮುಂಬಯಿಗೆ ವರ್ಗಾಯಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com