ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆಗಿಳಿದಿದೆ.
ಕೆಲ ದಿನಗಳ ಹಿಂದಷ್ಟೇ ಗಡಿಯಲ್ಲಿ ಅಪ್ರಚೋದಿತ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ತಾನ, ಭಾರತೀಯ ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಅಲ್ಲದೆ, ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಯೋಧರನ್ನು ಹತ್ಯೆ ಮಾಡಿ ಶಿರಚ್ಛೇದ ಮಾಡುವ ಮೂಲಕ ಪೈಶಾಚಿಕ ಕೃತ್ಯವೆಸಗಿತ್ತು.
ಪಾಕಿಸ್ತಾನದ ಈ ಪೈಶಾಚಿಕ ಕೃತ್ಯಕ್ಕೆ ಖಂಡನೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿವೆ.
ನಿನ್ನೆಯಷ್ಟೇ ಶೋಪಿಯಾನ್ ಜಿಲ್ಲೆಯ ಕೋರ್ಟ್ ಕಾಂಪ್ಲೆಕ್ಸ್ ನ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಶಂಕಿತ ಉಗ್ರರು ತಂಡ ಠಾಣೆಯಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿತ್ತು. 4 ಇನ್ಸಾಸ್ ರೈಫಲ್ ಮತ್ತು 1 ಎಕೆ-47 ಸೇರಿದಂತೆ 5 ಸರ್ವಿಸ್ ರೈಫಲ್ಸ್ ಗಳನ್ನು ಉಗ್ರರು ಹೊತ್ತೊಯ್ದಿದ್ದರು.
ಇದಕ್ಕೂ ಮುನ್ನ ಪುಲ್ವಾಮದಲ್ಲಿ ಎರಡು ಬ್ಯಾಂಕ್ ಗಳ ಮೇಲೆ ಉಗ್ರರು ದಾಳಿ ನಡೆಸಿ ದರೋಡೆ ಮಾಡಿದ್ದರು. ದಾಳಿಯಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿದೆ ಎಂಬ ಸತ್ಯಾಂಶ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದರು.
ಈ ಎಲ್ಲಾ ಘಟನೆಗಳನ್ನು ಗಮನದಲ್ಲಿಟ್ಟುಕೊಂಡಿರುವ ಸೇನ ಪಡೆ, ಗ್ರಾಮಸ್ಥರನ್ನು ಸ್ಥಳಾಂತರ ಮಾಡಿದ್ದು, ಉಗ್ರ ನಿಗ್ರಹಕ್ಕಾಗಿ ಭಾರೀ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಪದ್ಗಮ್ಪೊರಾ ಮತ್ತು ಖಗ್ಪುರದಲ್ಲಿ ಇಬ್ಬರು ಉಗ್ರರನ್ನು ಕಂಡು ಹಿಡಿಯಲಾಗಿದೆ. ಈ ಹಿಂದೆ ನಡೆದ ಘಟನೆಗಳಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿರುವುದು ಖಚಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉಗ್ರರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಹೀಗಾಗಿಯೇ ಬ್ಯಾಂಕ್ ಗಳಲ್ಲಿ ದರೋಡೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉಗ್ರ ಸಂಘಟನೆಗಳು ಸುಧಾರಿತ ತಾಂತ್ರಿಕ ಗ್ಯಾಜೆಟ್ಗಳನ್ನು ಬಳಕೆ ಮಾಡುತ್ತಿದ್ದಾರೆ. ನಮ್ಮ ತನಿಖೆಯನ್ನು ಮುಂದುವರೆಸುತ್ತಿದ್ದೇವೆಂದು ತಿಳಿಸಿದ್ದಾರೆ.