ಕಪಿಲ್ ಮಿಶ್ರಾ
ದೇಶ
ಸತ್ಯೇಂದರ್ ಜೈನ್'ರಿಂದ ಕೇಜ್ರಿವಾಲ್ ರೂ.2 ಕೋಟಿ ಲಂಚ ಪಡೆದಿದ್ದರು: ಕಪಿಲ್ ಮಿಶ್ರಾ ಹೊಸ ಬಾಂಬ್
ಪಕ್ಷದ ವಿರುದ್ಧ ಸಡ್ಡು ಹೊಡೆದು ಸಚಿವ ಸ್ಥಾನದಿಂದ ವಜಾಗೊಂಡಿದ್ದ ಕಪಿಲ್ ಮಿಶ್ರಾ ಅವರು ಹೊಸ ಬಾಂಬ್ ವೊಂದನ್ನು ಸಿಡಿಸಿದ್ದು, ಭೂ ಒಪ್ಪಂದಕ್ಕೆ ಸಂಬಂಧಿಸಿದಂತೆ ಸತ್ಯೇಂದರ್ ಜೈನ್, ಕೇಜ್ರಿವಾಲ್ ಅವರಿಗೆ...
ನವದೆಹಲಿ: ಪಕ್ಷದ ವಿರುದ್ಧ ಸಡ್ಡು ಹೊಡೆದು ಸಚಿವ ಸ್ಥಾನದಿಂದ ವಜಾಗೊಂಡಿದ್ದ ಕಪಿಲ್ ಮಿಶ್ರಾ ಅವರು ಹೊಸ ಬಾಂಬ್ ವೊಂದನ್ನು ಸಿಡಿಸಿದ್ದು, ಭೂ ಒಪ್ಪಂದಕ್ಕೆ ಸಂಬಂಧಿಸಿದಂತೆ ಸತ್ಯೇಂದರ್ ಜೈನ್ ಅವರು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ರೂ.2 ಕೋಟಿ ಲಂಚವನ್ನು ನೀಡಿದ್ದರು ಎಂದು ಭಾನುವಾರ ಆರೋಪಿಸಿದ್ದಾರೆ.
ದೆಹಲಿ ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಪಿಸ್ ಮಿಶ್ರಾ ಅವರು ಹೊಸ್ ಬಾಂಬ್ ವೊಂದನ್ನು ಸಿಡಿಸಿದರು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಜೊತೆಗೆ ಸತ್ಯೇಂದರ್ ಜೈನ್ ಅವರು ರೂ.50 ಕೋಟಿ ಭೂ ಒಪ್ಪಂದ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸತ್ಯೇಂದರ್ ಜೈನ್ ಅವರು ಕೇಜ್ರಿವಾಲ್ ಅವರಿಗೆ ನಗದು ರೂಪದಲ್ಲಿ ರೂ.2 ಕೋಟಿಯನ್ನು ನೀಡಿದ್ದರು. ಈ ಹಣದ ಬಗ್ಗೆ ಕೇಜ್ರಿವಾಲ್ ಅವರು ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರು ಹಣ ಪಡೆದಿದ್ದನ್ನು ನಾನೇ ನನ್ನ ಕಣ್ಣಿನಿಂದ ನೋಡಿದ್ದೇನೆ.ಈ ಬಗ್ಗೆ ಈಗಾಗಲೇ ನಾನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ವಿವರ ನೀಡಿದ್ದೇನೆ. ಎಲ್ಲಾ ತನಿಖಾ ಸಂಸ್ಥೆಗಳಿಗೂ ಮಾಹಿತಿ ನೀಡಿದ್ದೇನೆ. ಇದನ್ನು ಸಿಬಿಐ ಅಥವಾ ಯಾವುದೇ ತನಿಖಾ ಸಂಸ್ಥೆಯ ಮುಂದೆ ಬೇಕಾದರೂ ಸಾಕ್ಷ್ಯ ನುಡಿಯುತ್ತೇನೆ.
ಸತ್ಯೇಂದರ್ ಜೈನ್ ಅವರು ಜೈಲಿಗೆ ಹೋದಾಗ ಎಲ್ಲವೂ ಬಹಿರಂಗಗೊಳ್ಳಲಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವವರು ಹಾಗೂ ಅವರನ್ನು ರಕ್ಷಣೆ ಮಾಡುತ್ತಿರುವವರು ಪಕ್ಷದಿಂದ ಹೊರ ನಡೆಯಲಿದ್ದಾರೆ. ಈಗಾಗಲೇ ನಾನು ಅಧಿಕಾರಿಗಳಿಗೆ ಸಾಕ್ಷ್ಯಾಧಾರಗಳನ್ನು ನೀಡಿದ್ದಾರೆ. ಇನ್ನೇನಿದ್ದರು ಕಾನೂನು ಕ್ರಮಕೈಗೊಳ್ಳಲಿದೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಇವಿಎಂ (ವಿದ್ಯುನ್ಮಾನ ಮತಯಂತ್ರ) ಮೇಲೆ ಆರೋಪ ಮಾಡಲು ಆರಂಭಿಸಿದ್ದರು. ನಂತರ ನಾನು ಎಸಿಬಿಗೆ ಪತ್ರವನ್ನು ಬರೆದಿದ್ದೆ. ಇದಾದ ಬಳಿಕ ನನ್ನನ್ನು ಗುರಿ ಮಾಡಲಾಯಿತು.
ಪಕ್ಷದಲ್ಲಿ ಗೊಂದಲಗಳಿವೆ...ಕಸವಿದೆ...ಕೊಳೆ ಇದೆ...ಇದನ್ನು ಸ್ವಚ್ಛಗೊಳಿಸುವ ಕಾರ್ಯ ರಾಜಘಾಟ್ ನಿಂದ ಆರಂಭಗೊಳ್ಳಲಿದೆ. ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ವಿರುದ್ಧ ತಿಂಗಳೊಳಗಾಗಿ ವರದಿ ಸಿದ್ಧಪಡಿಸಿದ್ದೆ. ನಂತರ ನನಗೆ ಸಚಿವ ಸ್ಥಾನ ದೊರಕಿತ್ತು. ಆಮ್ ಆದ್ಮಿ ಪಕ್ಷದ ಸಂಸ್ಥಾಪಕರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ನನ್ನನ್ನು ಪಕ್ಷದಿಂದ ಹೊರ ಹಾಕಲು ಸಾಧ್ಯವಿಲ್ಲ. ನಾನು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಪ್ ಪಕ್ಷದ ಹಿರಿಯ ನಾಯಕ ಕುಮಾರ್ ವಿಶ್ವಾಸ್ ಅವರ ಜತೆಗೂಡಿದ್ದ ಕಪಿಲ್ ಮಿಶ್ರಾ ಆಮ್ ಆದ್ಮಿ ಪಕ್ಷದ ನಾಯಕತ್ವದ ವಿರುದ್ಧವೇ ಸೆಡ್ಡು ಹೊಡೆದಿದ್ದರು. ಇದರ ಬೆನ್ನಲ್ಲೇ ಸಚಿವ ಸಂಪುಟದಿಂದ ಕಪಿಲ್ ಮಿಶ್ರಾ ಅವರಿಗೆ ಗೇಟ್ ಪಾಸ್ ನೀಡಲಾಗಿತ್ತು.


