ನವದೆಹಲಿ: ಸಚಿವ ಸ್ಥಾನದಿಂದ ವಜಾಗೊಂಡ ಕಪಿಲ್ ಮಿಶ್ರಾ ಉಪವಾಸ ಸತ್ಯಾಗ್ರಹಕ್ಕೆ ಪ್ರತಿಯಾಗಿ ಅವರ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ಮಾಡಲು ಮುಂದಾದ ಆಮ್ ಆದ್ಮಿ ಪಕ್ಷದ ಶಾಸಕ ಸಂಜೀವ್ ಜಾ ಅವರನ್ನು ಶನಿವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸಾರ್ವಜನಿಕ ಶಾಂತಿ ಕದಡಲು ಯತ್ನಿಸುತ್ತಿದ್ದ ಆಪ್ ಶಾಸಕ ಸಂಜೀವ್ ಜಾ ಅವರನ್ನು ನಾವು ವಶಕ್ಕೆ ಪಡೆದಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಐಎಎನ್ಎಸ್ ಗೆ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕಪಿಲ್ ಮಿಶ್ರಾ ಅವರ ಸಿವಿಲ್ ಲೈನ್ಸ್ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲು ಸಂಜೀವ್ ಜಾ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ. ಅಲ್ಲದೆ ಪ್ರತಿಭಟನೆ ಹಿಂಪಡೆಯುವಂತೆ ಪೊಲೀಸರು ಮನವಿ ಮಾಡಿದರೂ ಪ್ರತಿಭಟನೆಗೆ ಮುಂದಾದ ಆಪ್ ಶಾಸಕನನ್ನು ವಶಕ್ಕೆ ಪಡೆಯಲಾಗಿದೆ.
ಕಪಿಲ್ ಮಿಶ್ರಾ ಅವರು ಆಪ್ ನಾಯಕರ ವಿದೇಶ ಪ್ರವಾಸದ ವೆಚ್ಚವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಆರಂಭಿಸುವ ಮೂಲಕ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಹೀಗಾಗಿ ಅವರ ವಿರುದ್ಧ ತಾವು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ನಿನ್ನೆ ಸಂಜೀವ್ ಜಾ ಘೋಷಿಸಿದ್ದರು.