
ಅಮರಾವತಿ: ಡಿಜಿಟಲ್ ಪಾವತಿಗೆ ವೇಗ ನೀಡುವ ನಿಟ್ಟಿನಲ್ಲಿ ಹೊಸ 2,000 ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಬೇಕು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ವಿಶಾಖಪಟ್ಟಣ ಪೊಲೀಸರು ಭಾರೀ ಹವಾಲಾ ದಂಧೆಯನ್ನು ಪತ್ತೆ ಹಚ್ಚಿದ ಸುದ್ದಿ ವ್ಯಾಪಕವಾಗಿ ಹಬ್ಬುತ್ತಿದ್ದಂತೆಯೇ ಈ ಬಗ್ಗೆ ಮಾತನಾಡಿದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು, ನೋಟು ನಿಷೇಧದ ನಂತರ ಆಂಧ್ರಪ್ರದೇಶಕ್ಕೆ ಹೆಚ್ಚಿನ ಹಣ ಕಳುಹಿಸುವಂತೆ ನಾನು ಆರ್ ಬಿಐನಲ್ಲಿ ಕೇಳಿಕೊಂಡಿದ್ದೆ. ಇದಕ್ಕೆ ಉತ್ತರಿಸಿದ್ದ ಆರ್ ಬಿಐ ಹಣ ಆಂಧ್ರಪ್ರದೇಶಕ್ಕೆ ಬರುತ್ತಿದ್ದು, ಎಲ್ಲಿಗೆ ತಲುಪುತ್ತಿದೆ ಎನ್ನುವುದು ತಿಳಿಯುತ್ತಿಲ್ಲ ಎಂದು ಆರ್ ಬಿಐ ಡೆಪ್ಯುಟಿ ಗವರ್ನರ್ ಹೇಳಿದ್ದರು. ಹೀಗಾಗಿ 2000, 500 ರು.ಮುಖಬೆಲೆಯ ನೋಟು ರದ್ದು ಮಾಡಬೇಕು ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಇದೇ ವೇಳೆ ವಿಪಕ್ಷ ನಾಯಕ ಜಗನ್ಮೋಹನ್ ರೆಡ್ಡಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಹವಾಲಾ ಮೂಲಕ ಸಾಗುತ್ತಿದ್ದ 1,379 ಕೋಟಿ ರು.ಗಳು ಸಿಕ್ಕಿದ್ದು, ಇದೀಗ ನಮಗೆ ಹಣ ಎಲ್ಲಿಗೆ ಹೋಗುತ್ತಿತ್ತು ಎನ್ನುವುದು ತಿಳಿದಿದೆ. ಈ ವಹಿವಾಟುಗಳಿಗಾಗಿ ಹಲವಾರು ನಕಲಿ ಕಂಪೆನಿಗಳನ್ನು ರಚಿಸಲಾಗಿತ್ತು. ಇದಕ್ಕೆಲ್ಲಾ ಯಾರು ಸೂತ್ರಧಾರ ಎಂದು ನಾಯ್ಡು ಪ್ರಶ್ನಿಸಿದರು.
"ಈ ಹಿಂದೆ 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಿದ್ದವರಲ್ಲಿ ನಾನು ಮೊದಲಿಗನಾಗಿದ್ದೇನೆ. ಇದೀಗ ಅವರು 2,000 ಹಾಗೂ 500 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದ್ದು, ಅವುಗಳೂ ಕೂಡ ಅಮಾನ್ಯಗೊಳ್ಳಬೇಕು ಎಂದು ನಾಯ್ಡು ಹೇಳಿದ್ದಾರೆ.
Advertisement