ಪಾಟ್ನಾ: ಬಿಹಾರದ ಜನಾತ ದಳ ಶಾಸಕ ಅಶೋಕ್ ಸಿಂಗ್ ಕೊಲೆ ಪ್ರಕರಣದಲ್ಲಿ ಆರ್ ಜೆಡಿ ಮಾಜಿ ಸಂಸದ ಪ್ರಭುನಾಥ್ ಸಿಂಗ್ ತಪ್ಪಿತಸ್ಥ ಎಂದು ಗುರುವಾರ ಜಾರ್ಖಂಡ್ ನ ಸ್ಥಳೀಯ ಕೋರ್ಟ್ ತೀರ್ಪು ನೀಡಿದೆ.
22 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಇಂದು ಶಾಸಕನ ಕೊಲೆ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದ ಹಜರಿಬಾಗ್ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುರೇಂದ್ರ ಶರ್ಮಾ ಅವರು, ಪ್ರಕರಣದ ಪ್ರಮುಖ ಆರೋಪಿ ಪ್ರಭುನಾಥ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಮೇ 23ಕ್ಕೆ ಕಾಯ್ದಿರಿಸಿದೆ.
ಈ ವೇಳೆ ಕೋರ್ಟ್ ನಲ್ಲಿ ಹಾಜರಿದ್ದ ಮಾಜಿ ಸಂಸದನನ್ನು ಕೂಡಲೇ ವಶಕ್ಕೆ ಪಡೆದು ಜೈಲಿಗೆ ಕಳುಹಿಸಲಾಗಿದೆ.
2004ರಲ್ಲಿ ಬಿಹಾರದ ಮಹಾರಾಜಗಂಜ್ ಲೋಕಸಭಾ ಕ್ಷೇತ್ರದ ಜೆಡಿಯು ಸಂಸದರಾಗಿದ್ದ ಪ್ರಭುನಾಥ್ ಸಿಂಗ್ ಅವರು, 2013ರ ಉಪ ಚುನಾವಣೆಯಲ್ಲಿ ಆರ್ ಜೆಡಿ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ 2014ರ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
ಜುಲೈ 3, 1995ರಲ್ಲಿ ಬಿಹಾರದ ಮಸರಖ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ 28 ವರ್ಷ ಅಶೋಕ್ ಸಿಂಗ್ ಅವರ ಮೇಲೆ ದುಷ್ಕರ್ಮಿಗಳ ತಂಡ ಬಾಂಬ್ ಎಸೆದು ಹತ್ಯೆ ಮಾಡಿತ್ತು.
1995ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಶೋಕ್ ವಿರುದ್ಧ ಸೋಲು ಅನುಭವಿಸಿದ ಪ್ರಭುನಾಥ್ ಸಿಂಗ್ ಅವರೇ ತಮ್ಮ ಪತಿಯನ್ನು ಕೊಲೆ ಮಾಡಿಸಿದ್ದು ಎಂದು ಆರೋಪಿಸಿ ಶಾಸಕರ ಪತ್ನಿ ಚಾಂದ್ನಿ ಅವರು ಮಾಜಿ ಸಂಸದ ಹಾಗೂ ಅವರ ಸಹೋದರರ ವಿರುದ್ಧ ಕೇಸ್ ದಾಖಲಿಸಿದ್ದರು.