ಭೂಕುಸಿತ: ಉತ್ತರಾಖಂಡದಲ್ಲಿ ಸಿಲುಕಿದ ಸಾವಿರಕ್ಕೂ ಹೆಚ್ಚು ಕನ್ನಡಿಗರು

ಪವಿತ್ರ ಕ್ಷೇತ್ರ ಬದ್ರಿನಾಥ್ ಹೆದ್ದಾರಿಯಲ್ಲಿ ಸಂಭವಿಸಿರುವ ಭಾರಿ ಪ್ರಮಾಣದ ಭೂಕುಸಿತದಿಂದಾಗಿ ಉತ್ತರಾಖಂಡದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಕನ್ನಡಿಗ ಯಾತ್ರಾರ್ಥಿಗಳು ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ಬದ್ರಿನಾಥ್ ನಲ್ಲಿ ಭೂಕುಸಿತ
ಬದ್ರಿನಾಥ್ ನಲ್ಲಿ ಭೂಕುಸಿತ

ಡೆಹ್ರಾಡೂನ್: ಪವಿತ್ರ ಕ್ಷೇತ್ರ ಬದ್ರಿನಾಥ್ ಹೆದ್ದಾರಿಯಲ್ಲಿ ಸಂಭವಿಸಿರುವ ಭಾರಿ ಪ್ರಮಾಣದ ಭೂಕುಸಿತದಿಂದಾಗಿ ಉತ್ತರಾಖಂಡದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಕನ್ನಡಿಗ ಯಾತ್ರಾರ್ಥಿಗಳು ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

ದೈನಿಕವೊಂದು ವರದಿ ಮಾಡಿರುವಂತೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಪ್ರಯಾಗ ಸಮೀಪ ಭೂ ಕುಸಿತದ ಪರಿಣಾಮ ರಾಜ್ಯದ 1000ಕ್ಕೂ ಹೆಚ್ಚು ಮಂದಿ ಮಾರ್ಗ ಮಧ್ಯೆ ಸಿಲುಕಿದ್ದಾರೆ. ಈ ಪೈಕಿ ಸುಮಾರು 300  ಕನ್ನಡಿಗರು ಈಗ ಬದ್ರಿನಾಥ್‌ ಸಮೀಪದ ಜೋಷಿ ಮಠದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜೋಷಿಮಠದ ವೇಣುಗೋಪಾಲ್‌ ಅವರು ಮಾಹಿತಿ ನೀಡಿದ್ದು, ಕರ್ನಾಟಕ ಹಾಗೂ ಅಕ್ಕಪಕ್ಕದ ರಾಜ್ಯದಿಂದ  ಇಲ್ಲಿಗೆ ಬಂದವರಿಗೆ ಆಶ್ರಯ ನೀಡುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬದರೀ ನಾಥಬಳಿ ಭೂ ಕುಸಿತ ಉಂಟಾಗಿ ಅಪಾಯಕ್ಕೆ ಸಿಕ್ಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಅಲ್ಲಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇರುವಂತೆ ರಾಜ್ಯದ ಅಧಿಕಾರಿಗಳಿಗೆ  ಸೂಚಿಸಲಾಗಿದೆ.  ಉತ್ತರಾಖಂಡದ ಚಮೋಲಿಯಲ್ಲಿ ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಯ ನಂತರ ವಿಷ್ಣಪ್ರಯಾಗ ಬಳಿ ಭೂಮಿ ಕುಸಿದಿದೆ. ಇದರಿಂದ ಹೃಷಿಕೇಶ-ಬದರಿನಾಥ ನಡುವಿನ ಹೆದ್ದಾರಿ ಬಂದ್‌ ಆಗಿದೆ. ವಿವಿಧ  ಸ್ಥಳಗಳಲ್ಲಿ ಸಾವಿರಾರು ಯಾತ್ರಾರ್ಥಿಗಳು ಅಲ್ಲಿಂದ ಮುಂದೆ ಪ್ರಯಾಣ ಮಾಡದ ಸ್ಥಿತಿಯಲ್ಲಿದ್ದಾರೆ.

ಕರ್ನಾಟಕದ ಬಳ್ಳಾರಿ, ಬೆಂಗಳೂರು, ರಾಯಚೂರು ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದ 1000ಕ್ಕೂ ಹೆಚ್ಚು ಯಾತ್ರಾರ್ಥಿಗಳು ಬದರಿನಾಥಕ್ಕೆ ಭೇಟಿ ನೀಡಿ ನಂತರ ವಿಷ್ಣುಪ್ರಯಾಗದ ಮೂಲಕ ಹಿಂದಿರುಗಬೇಕಿತ್ತು. ಆದರೆ  ವಿಷ್ಣುಪ್ರಯಾಗ ಬಳಿ ಹೆದ್ದಾರಿಯಲ್ಲಿ ಸುಮಾರು 60 ಮೀಟರ್‌ ಉದ್ದ ಮತ್ತು 100 ಮೀಟರ್‌ ಆಳಕ್ಕೆ ಭೂಕುಸಿತ ಉಂಟಾಗಿ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ನೂರಾರು ಯಾತ್ರಾ ರ್ಥಿಗಳು ಜೋಷಿಮಠ ಮತ್ತು ಕಣಿವೆ ಸಮೀಪದ  ಹೋಟೆಲ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ. ಒಟ್ಟಾರೆ ಭೂಕುಸಿತ ಸಂಭವಿಸಿದ ಮಾರ್ಗದಲ್ಲಿ 20, 000ಕ್ಕೂ ಹೆಚ್ಚು ಜನ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com