ಹಿಜ್ಬುಲ್ ತೊರೆದಿದ್ದ ಝಾಕಿರ್ ಮುಸಾನಿಂದ ಹೊಸ ಉಗ್ರ ಸಂಘಟನೆ

ಪ್ರತ್ಯೇಕತಾವಾದಿಗಳ ಹೇಳಿಕೆ ನೀಡಿ ಸಂಘಟನೆಯಿಂದಲೇ ಬೆಂಬಲ ವ್ಯಕ್ತವಾಗದ ಹಿನ್ನಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ತೊರೆದಿದ್ದ ಉಗ್ರ ಝಾಕಿರ್ ಮುಸಾ ಇದೀಗ ಹೊಸ ಉಗ್ರ ಸಂಘಟನೆಯನ್ನು ಸ್ಥಾಪಿಸುವುದಾಗಿ...
ಉಗ್ರ ಝಾಕಿರ್ ಮುಸಾ
ಉಗ್ರ ಝಾಕಿರ್ ಮುಸಾ
ಶ್ರೀನಗರ: ಪ್ರತ್ಯೇಕತಾವಾದಿಗಳ ಹೇಳಿಕೆ ನೀಡಿ ಸಂಘಟನೆಯಿಂದಲೇ ಬೆಂಬಲ ವ್ಯಕ್ತವಾಗದ ಹಿನ್ನಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ತೊರೆದಿದ್ದ ಉಗ್ರ ಝಾಕಿರ್ ಮುಸಾ ಇದೀಗ ಹೊಸ ಉಗ್ರ ಸಂಘಟನೆಯನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದಾನೆ. 
ನಿನ್ನೆಯಷ್ಟೇ ಆಡಿಯೋ ಟೇಪ್ ವೊಂದನ್ನು ಝಾಕಿರ್ ಮುಸಾ ಬಿಡುಗಡೆ ಮಾಡಿದ್ದು, ಆಡಿಯೋ ಟೇಪ್ ನಲ್ಲಿ ಹೊಸ ಸಂಘಟನೆ ಸ್ಥಾಪನೆ ಮಾಡಲು ನಿರ್ಧರಿಸಿದ್ದು, ಅಲ್ ಖೈದಾಗೆ ಬೆಂಬಲ ವ್ಯಕ್ತಪಡಿಸುತ್ತೇನೆಂದು ಎಂದು ಹೇಳಿದ್ದಾನೆ. 
ಝಾಕಿರ್ ಒಟ್ಟು ಎರಡು ಟೇಪ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾನೆ. ಮೊದಲು ಬಿಡುಗಡೆಯಾಗಿದ್ದ ಆಡಿಯೋ ಟೇಪ್ ನಲ್ಲಿ ಝಾಕಿರ್ ಪ್ರತ್ಯೇಕತಾವಾದಿಗಳಿಗೆ ಬೆದರಿಕೆ ಹಾಕಿದ್ದ. 
ನನ್ನ ಹೆಸರಿನಲ್ಲಿ ಕಾಶ್ಮೀರಿಗರು ಪ್ರತ್ಯೇಕತಾವಾದಿಗಳಿಗೆ ದೇಣಿಗೆ ಹಣ ನೀಡುತ್ತಿದ್ದು, ನನ್ನ ಬಳಿಯಿರುವ ವ್ಯಕ್ತಿಗಳಾರೂ ಕಾಶ್ಮೀರಿಗರ ಬಳಿ ಹಣವನ್ನು ತೆಗೆದುಕೊಳ್ಳುತ್ತಿಲ್ಲ. ನನ್ನ ಹೆಸರನ್ನು ಹೇಳಿ ಹಣ ಪಡೆಯುತ್ತಿರುವವರನ್ನು ಸುಮ್ಮನೆ ಬಿಡುವುದಿಲ್ಲ. ಕಪಟವೇಷಧಾರಿಗಳನ್ನು ಕೊಂದು ಅದರ ವಿಡಿಯೋಗಳನ್ನು ಬಿಡುಗಡೆ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ ಎಂದು ಎಚ್ಚರಿಸಿದ್ದಾನೆ. 
ಇದಾದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಆಡಿಯೋ ಟೇಪ್'ನ್ನು ಬಿಡುಗಡೆ ಮಾಡಿರುವ ಝಾಕೀರ್, ಈ ಟೇಪ್ ನಲ್ಲಿ ಹೊಸ ಸಂಘಟನೆಯನ್ನು ಸ್ಥಾಪನೆ ಮಾಡುತ್ತಿದ್ದು, ಅಲ್-ಖೈದಾ ಉಗ್ರ ಸಂಘಟನೆಯ ಬೆಂಬಲ ವ್ಯಕ್ತಪಡಿಸುತ್ತೇನೆಂದು ತಿಳಿಸಿದ್ದಾನೆ.
 ಕೆಲ ದಿನಗಳ ಹಿಂದಷ್ಟೇ ಪ್ರತ್ಯೇಕತಾವಾದಿಗಳಿಗೆ ಝಾಕಿರ್ ಬೆದರಿಕೆ ಹಾಕಿದ್ದ. ಕಪಟವೇಷದಾರಿ ಹುರಿಯತ್ ನಾಯಕರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ. ಇಸ್ಲಾಂ ಕುರಿತಂತೆ ನಮ್ಮ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ಪ್ರತ್ಯೇಕತಾವಾದಿಗಳು ಮಧ್ಯೆ ಪ್ರವೇಶ ಮಾಡಬಾರದು. ಮಾಡಿದ್ದೇ ಆದರೆ, ಅವರ ತಲೆಗಳನ್ನು ಕಡಿದು ಲಾಲ್ ಚೌಕ್ ನಲ್ಲಿ ನೇತು ಹಾಕುತ್ತೇವೆ. 
ಕಾಶ್ಮೀರದಲ್ಲಿ ಷರಿಯತ್ ಹೇರುವುದು ನಮ್ಮ ಹೋರಾಟದ ಉದ್ದೇಶವಾಗಿದೆಯೇ ಹೊರತು ಕಾಶ್ಮೀರದ ರಾಜಕೀಯ ತಿಕ್ಕಾಟದ ಸಮಸ್ಯೆ ಬಗೆಹರಿಸುವುದಕ್ಕಾಗಿ ಅಲ್ಲ. ನಮ್ಮ ಹೋರಾಟ ಇಸ್ಲಾಂ ಹಾಗೂ ಷರಿಯತ್ ಗಾಗಿ ಎಂಬುದನ್ನು ಪ್ರತ್ಯೇಕತಾವಾದಿಗಳು ತಿಳಿಯಬೇಕಿದೆ ಎಂದು ಝಾಕೀರ್ ಮುಸಾ ಹೇಳಿದ್ದ. 
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ವಕ್ತಾರ ಸಲೀಮ್ ಹಶ್ಮಿ, ಮುಸಾ ಹೇಳಿಕೆಗೂ ಸಂಘಟನೆಗೂ ಸಂಬಂಧವಿಲ್ಲ. ಈ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಮುಸಾ ಹೇಳಿಕೆ ವೈಯಕ್ತಿಕ ಹೇಳಿಕೆಯಾಗಿದ್ದು, ಇದಕ್ಕೂ ಸಂಘಟನೆಗೂ ಸಂಬಂಧವಿಲ್ಲ ಎಂದು ಹೇಳಿದ್ದ. 
ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಈ ಪ್ರತಿಕ್ರಿಯೆ ಅಸಮಾಧಾನ ವ್ಯಕ್ತಪಡಿಸಿದ್ದ ಝಾಕಿರ್, ಹಿಜ್ಬುಲ್ ನನ್ನನ್ನು ತನ್ನ ಸಂಘಟನೆಯ ಸದಸ್ಯನೆಂದು ಪರಿಗಣಿಸದಿದ್ದ ಮೇಲೆ ನಾನೂ ಆ ಸಂಘಟನೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿಕೊಂಡಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com