ಆರ್ ಎಸ್ಎಎಸ್
ದೇಶ
ಉತ್ತರ ಪ್ರದೇಶ: ಆರ್ ಎಸ್ಎಎಸ್ ನ ಮುಸ್ಲಿಂ ಅಂಗಸಂಸ್ಥೆಯಿಂದ ಇಫ್ತಾರ್ ಕೂಟ; ಹಾಲಿನ ಉತ್ಪನ್ನ ಮಾತ್ರ ಬಳಕೆ!
ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಮುಸ್ಲಿಂ ಅಂಗಸಂಸ್ಥೆ ಮುಸ್ಲಿಮ್ ರಾಷ್ಟ್ರೀಯ ಮಂಚ್(ಎಂಆರ್ ಎಂ) ಉತ್ತರ ಪ್ರದೇಶದಲ್ಲಿ ಈ ಬಾರಿಯ ರಂಜಾನ್ ನ್ನು ವಿನೂತನ ರೀತಿಯಲ್ಲಿ ಆಚರಿಸಲು ನಿರ್ಧರಿಸಿದೆ
ಲಖನೌ: ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಮುಸ್ಲಿಂ ಅಂಗಸಂಸ್ಥೆ ಮುಸ್ಲಿಮ್ ರಾಷ್ಟ್ರೀಯ ಮಂಚ್(ಎಂಆರ್ ಎಂ) ಉತ್ತರ ಪ್ರದೇಶದಲ್ಲಿ ಈ ಬಾರಿಯ ರಂಜಾನ್ ನ್ನು ವಿನೂತನ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದು, ರಂಜಾನ್ ಅಂಗವಾಗಿ ಆಯೋಜಿಸಲಾಗುವ ಇಫ್ತಾರ್ ಕೂಟವನ್ನು ಸಸ್ಯಹಾರಿಯಾಗಿಸಲು ತೀರ್ಮಾನಿಸಿದೆ.
ಗೋವು ಉಳಿಸಿ ಅಭಿಯಾನದ ಸಂದೇಶ ಸಾರಲು ರಂಜಾನ್ ವೇಳೆ ಆಯೋಜಿಸಲಾಗುವ ಇಫ್ತಾರ್ ಕೂಟದಲ್ಲಿ ಕೇವಲ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನಷ್ಟೇ ಬಳಕೆ ಮಾಡಲು ಎಂಆರ್ ಎಂ ತೀರ್ಮಾನಿಸಿದೆ ಎಂದು ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ ಮಹಿರಾಜ್ ಧ್ವಜ್ ಸಿಂಗ್ ಹೇಳಿದ್ದಾರೆ.
ರಂಜಾನ್ ವೇಳೆ ಉಪವಾಸ ಕೈಗೂಳ್ಳುವ ಮುಸ್ಲಿಮ್ ಬಾಂಧವರು ಗೋವಿನ ಹಾಲನ್ನು ಸೇವಿಸಿ ದಿನದ ಉಪವಾಸವನ್ನು ಅಂತ್ಯಗೊಳಿಸುತ್ತಾರೆ ಹಾಗೂ ಇಫ್ತಾರ್ ಕೂಟದಲ್ಲಿ ಗೋವಿನ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ ಎಂದು ಮಹಿರಾಜ್ ಧ್ವಜ್ ಸಿಂಗ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥಹದ್ದೊಂದು ಇಫ್ತಾರ್ ಕೂಟ ನಡೆಯುತ್ತಿದ್ದು, ಹಾಲಿನ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಮುಸ್ಲಿಮ್ ಸಮುದಾಯದ ವಿದ್ವಾಂಸರೂ ಸಹ ಒಪ್ಪಿದ್ದಾರೆ, ಗೋ ಸಂರಕ್ಷಣೆಗಾಗಿ ರಂಜಾನ್ ವೇಳೆ ಮುಸ್ಲಿಮ್ ಬಾಂಧವರು ಪ್ರಾರ್ಥನೆ ನಡೆಸಲಿದ್ದಾರೆ ಎಂದು ಆರ್ ಎಸ್ಎಸ್ ತಿಳಿಸಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಅಂಗ ಸಂಸ್ಥೆಯ ನಿರ್ಧಾರವನ್ನು ಉತ್ತರ ಪ್ರದೇಶದ ಅನೇಕ ಮುಸ್ಲಿಮ್ ಸಂಘಟನೆಗಳೂ ಸಹ ಸ್ವಾಗತಿಸಿದ್ದು, ಇಫ್ತಾರ್ ವೇಳೆ ಹಾಲಿನ ಉತ್ಪನ್ನಗಳನ್ನು ಬಳಕೆ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಮುಸ್ಲಿಮ್ ರಾಷ್ಟ್ರೀಯ ಮಂಚ್ ನ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಮುಸ್ಲಿಮ್ ಸಮುದಾಯದ ನಾಯಕ ವೇಸೀಮ್ ರೈನಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ