ಹಿಜ್ಬುಲ್ ಕಮಾಂಡರ್ ಸಬ್ಜಾರ್ ಭಟ್ ಹತ್ಯೆ: ಕಾಶ್ಮೀರದಲ್ಲಿ ಮತ್ತೆ ಇಂಟರ್ನೆಟ್ ಸೇವೆ ಸ್ಥಗಿತ

ಟ್ರಾಲ್ ನಲ್ಲಿ ನಡೆಸಲಾದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಸಬ್ಜಾರ್ ಭಟ್ ನನ್ನು ಹತ್ಯೆ ಮಾಡಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗದಂತೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಟ್ರಾಲ್ ನಲ್ಲಿ ನಡೆಸಲಾದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಸಬ್ಜಾರ್ ಭಟ್ ನನ್ನು ಹತ್ಯೆ ಮಾಡಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. 
ಕಾಶ್ಮೀರದಲ್ಲಿ ಬೀದಿ ಬೀದಿಗಳಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆ ಹತ್ತಿಕ್ಕುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ಹೇರಿದ್ದರು. ಇದಾದ ಬಳಿಕ ಕಳೆದ ರಾತ್ರಿ 8.30ರ ಬಳಿಕವಷ್ಟೇ ನಿರ್ಬಂಧವನ್ನು ತೆರವುಗೊಳಿಸಿದ್ದರು. 
ಸಾಮಾಜಿಕ ಜಾಲತಾಣಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ ಇನ್ನೂ 24 ಗಂಟೆಗಳೂ ಕಳೆದಿಲ್ಲ. ಇದೀಗ ಮತ್ತೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 
ಉಗ್ರರು ಹಾಗೂ ನುಸುಳುಕೋರರನ್ನು ಮಟ್ಟಹಾಕಲು ಮುಂದಾಗಿದ್ದಭದ್ರತಾ ಪಡೆಗಳು ಇಂದು ಬೆಳಿಗ್ಗೆಯಷ್ಟೇ 2 ಪ್ರತ್ಯೇಕ ಎನ್ ಕೌಂಟರ್ ಗಳನ್ನು ನಡೆಸಿತ್ತು. 
ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಕಮಾಂಡರ್ ಸಬ್ಜಾರ್ ಭಟ್ ಅಲಿಯಾಸ್ ಅಬು ಜರಾರ್ ಸೇರಿ 8 ಮಂದಿ  ಉಗ್ರರನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿದೆ.
ಪುಲ್ವಾಮಾ ಜಿಲ್ಲೆಯ ಟ್ರಾಲ್ ಸೆಕ್ಟರ್ ನ ಕಟ್ಟಡವೊಂದರಲ್ಲಿ ಅಡಗಿ ಕುಳಿತಿದ್ದ ಇಬ್ಬರು ಉಗ್ರರು ಭಾರತೀಯ ಸೇನಾ ಪಡೆ ದಾಳಿಗೆ ಬಲಿಯಾಗಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ  ರಾಂಪುರ್ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ ಬಳಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ್ದ ಆರು ಮಂದಿ ಉಗ್ರರನ್ನು ಭಾರತೀಯ ಸೇನಾ ಪಡೆ ಗುಂಡಿಟ್ಟು ಹತ್ಯೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com