ಉಗ್ರ ಸಬ್ಜಾರ್ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಪರಿಸ್ಥಿತಿ ಉದ್ವಿಗ್ನ; ಕರ್ಫ್ಯೂ ಜಾರಿ

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಸಬ್ಜಾರ್ ಭಟ್ ಹತ್ಯೆ ಖಂಡಿಸಿ ಕಾಶ್ಮೀರದಲ್ಲೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದು, ಈ ಹಿನ್ನಲೆಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಸಬ್ಜಾರ್ ಭಟ್ ಹತ್ಯೆ ಖಂಡಿಸಿ ಕಾಶ್ಮೀರದಲ್ಲೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದು, ಈ ಹಿನ್ನಲೆಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ.  
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿ ಹತ್ಯೆಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹೈಪ್ರೊಫೈಲ್ ಭಯೋತ್ಪಾದಕನೆಂದೇ ಹೇಳಲಾಗುತ್ತಿದ್ದ ಸಬ್ಜಾರ್ ಭಟ್ ನನ್ನು ನಿನ್ನೆಯಷ್ಟೇ ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಲಾಗಿತ್ತು. 
ಸಬ್ಜಾರ್ ಭಟ್ ಹತ್ಯೆ ಬೆನ್ನಲ್ಲೇ ಇದೀಗ ಕಾಶ್ಮೀರದಲ್ಲಿ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿವೆ. ಕಾಶ್ಮೀರದಾದ್ಯಂತ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಆರಂಭವಾಗಿದೆ. ಘರ್ಷಣೆಯಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದು, ಐವರು ಪೊಲೀಸರು ಸೇರಿದಂತೆ ಒಟ್ಟು 35ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. 
ವದಂತಿಗಳು ಹಬ್ಬುವುದನ್ನು ಹತ್ತಿಕ್ಕುವ ಸಲುವಾಗಿ ಈಗಾಗಲೇ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಉಗ್ರನ ಹತ್ಯೆ ವಿರೋಧಿಸಿ ಪ್ರತ್ಯೇಕತಾವಾದಿ ನಾಯಕರು ಎರಡು ದಿನಗಳ ಕಾಶ್ಮೀರ ಬಂದ್ ಗೆ ಕರೆ ನೀಡಿದ್ದಾರೆ. ಇದರೊಂದಿಗೆ ಕಣಿವೆ ರಾಜ್ಯ ಮತ್ತೊಮ್ಮೆ ಭಾರೀ ಉದ್ವಿಗ್ನ ಸ್ಥಿತಿಗೆ ತಲುಪಿದೆ. 
ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿರುವ ಹಿನ್ನಲೆಯಲ್ಲಿ ಶ್ರೀನಗರದ ಕ್ರಾಲ್ಖುಂಡ್, ಖನ್ಯಾರ್, ರೈನಾವರಿ, ಸಫ ಕದಲ್, ಮಹರಾಜ್ ಗುಂಜ್, ಮೈಸುಮಾ, ಬಟಮಲೂ ಮತ್ತು ನೌಹಟ್ಟಾ ಸೇರಿದಂತೆ ಹಲವೆಡೆ ಕರ್ಫ್ಯೂ ಜಾರಿ ಮಾಡಲಾಗಿದೆ. ಇದಲ್ಲದೆ, ಪ್ರತಿಭಟನೆ ಹಾಗೂ ಘರ್ಷಣೆ ಹಿನ್ನಲೆಯಲ್ಲಿ ಶಾಲಾ, ಕಾಲೇಜುಗಳನ್ನು ಬಂದ್ ಮಾಡುವಂತೆ ಅಧಿಕಾರಿಗಳು ಆದೇಶಿಸಿದ್ದಾರೆಂದು ತಿಳಿದುಬಂದಿದೆ. 
ಉಗ್ರರು ಹಾಗೂ ನುಸುಳುಕೋರರನ್ನು ಮಟ್ಟ ಹಾಕಲು ಮುಂದಾಗಿದ್ದ ಭದ್ರತಾ ಪಡೆಗಳು ನಿನ್ನೆಯಷ್ಟೇ 2 ಪ್ರತ್ಯೇಕ ಎನ್ ಕೌಂಟರ್ ಗಳನ್ನು ನಡೆಸಿತ್ತು. ಪುಲ್ವಾಮಾ ಜಿಲ್ಲೆಯ ಟ್ರಾಲ್ ಸೆಕ್ಟರ್ ಹಾಗೂ ರಾಂಪುರ್ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ ಬಳಿ ಎನ್ ಕೌಂಟರ್ ನಡೆಸಿತ್ತು. ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಕಮಾಂಡರ್ ಸಬ್ಜಾರ್ ಭಟ್ ಅಲಿಯಾಸ್ ಅಬು ಜರಾರ್ ಸೇರಿ ಒಟ್ಟು 10 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿತ್ತು. 
ಹತ ಹಿಜ್ಬುಲ್ ಉಗ್ರ ಬುರ್ಹಾನ್ ವಾನಿಯ ಬಲಗೈ ಬಂಟ ಈ ಸಬ್ಜಾರ್ ಭಟ್. ವಾನಿ ಹತ್ಯೆ ಬಳಿಕ ಝಾಕಿರ್ ಮೂಸಾ ಹಿಜ್ಬುಲ್ ಸಂಘಟನೆಯ ನೇತೃತ್ವ ವಹಿಸಿದ್ದ. ಇತ್ತೀಚೆಗಷ್ಟೇ ಪ್ರತ್ಯೇಕತಾವಾದಿಗಳ ತಲೆ ಕತ್ತರಿಸಿವೆ ಎಂದು ಮೂಸಾ ಹೇಳಿಕೆ ಬಿಡುಗಡೆ ಮಾಡಿದ್ದ. ಇದರಿಂದಾಗಿ ಪ್ರತ್ಯೇಕತಾವಾದಿಗಳಿಂದ ಮೂಸಾ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿತ್ತು. 
ಅಲ್ಲದೆ, ಸ್ವತಃ ಹಿಜ್ಬುಲ್ ಸಂಘಟನೆಯ ಮೂಸಾ ಹೇಳಿಕೆ ಕೇವಲ ವೈಯಕ್ತಿಕ ಹೇಳಿಕೆಯಾಗಿದ್ದು, ಹೇಳಿಕೆ ಸಂಘಟನೆ ಒಪ್ಪುವುದಿಲ್ಲ ಎಂದು ನೇರವಾಗಿ ಹೇಳಿತ್ತು. ಇದರಿಂದಾಗಿ ಅಸಮಾಧಾನಗೊಂಡ ಮೂಸಾ ಸಂಘಟನೆಯನ್ನು ತೊರೆದಿದ್ದ. 15 ದಿನದ ಹಿಂದಷ್ಟೇ ಮೂಸಾ ಜಾಗಕ್ಕೆ ಸಬ್ಜಾರ್ ಅಹ್ಮದ್ ಭಟ್ ನನ್ನು ನೇಮಿಸಲಾಗಿತ್ತು. ಈತನನ್ನು ಹಿಡಿದು ಕೊಟ್ಟವರಿಗೆ ಸರ್ಕಾರ ರೂ.10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಕೂಡ ಮಾಡಿತ್ತು. 
ಸಬ್ಜಾರ್ ಗೂ ಮುನ್ನ ಕಾಶ್ಮೀರದಲ್ಲಿ ಹಿಜ್ಬುಲ್ ನೇತೃತ್ವ ವಹಿಸಿದ್ದ ಝಾಕೀರ್ ಮೂಸಾ, ಪ್ರತ್ಯೇಕತಾವಾದಿಗಳಿಗೆ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಹುರಿಯತ್ ನಾಯಕರು ಹಿಜ್ಬುಲ್ ನಿಂದ ಅಂತರ ಕಾಯ್ದಿದ್ದರು. ಈ ಹಿನ್ನೆಲೆಯಲ್ಲಿ ಹುರಿಯತ್ ಜೊತೆ ಸಂಬಂಧ ಸುಧಾರಣೆ ಮಾತುಕತೆಗಾಗಿ ಸಬ್ಜಾರ್ ತ್ರಾಲ್ ಗೆ ಆಗಮಿಸಿದ್ದ. ಇದರ ಮಾಹಿತಿ ಪಡೆದಿದ್ದ ಸೇನಾ ಪಡೆ ಆತನ ಮೇಲೆ ಮುಗಿಬಿದ್ದಿತ್ತು. ಈ ವೇಳೆ ನಡೆಸಲಾಗಿದ್ದ ಎನ್ ಕೌಂಟರ್ ನಲ್ಲಿ ಸಬ್ಜಾರ್ ಹತನಾಗಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com