ಚೆನ್ನೈ: ಚೆನ್ನೈನ ಹೊರವಲಯದಲ್ಲಿರುವ ಮಹೀಂದ್ರಾ ವರ್ಲ್ಡ್ ಸಿಟಿ ಕ್ಯಾಂಪಸ್ ನಲ್ಲಿರುವ ಇನ್ಫೋಸಿಸ್ ಕಚೇರಿಯ ಶೌಚಾಲಯದ ಬಳಿ ಮಂಗಳವಾರ ರಾತ್ರಿ 30 ವರ್ಷದ ಇನ್ಫೋಸಿಸ್ ನೌಕರನ ಬೆತ್ತಲೆ ಮೃತದೇಹ ಪತ್ತೆಯಾಗಿದೆ.
ಮೃತ ಇನ್ಫೋಸಿಸ್ ಉದ್ಯೋಗಿ ಇಳೆಯರಾಜ ಎಂದು ಗುರುತಿಸಲಾಗಿದ್ದು, ವಿಲ್ಲುಪೂರಂ ನಿವಾಸಿಯಾಗಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ತಿಂಡಿವಾಣಂನಲ್ಲಿ ವಾಸಿಸುತ್ತಿದ್ದ ಇಳೆಯರಾಜ ಅವರು ಕಳೆದ ಸೋಮವಾರ ಕಚೇರಿಗೆ ತೆರಳಿದ್ದವರು ವಾಪಸ್ ಬಂದಿಲ್ಲ. ಹೀಗಾಗಿ ಅವರ ಪತ್ನಿ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳವಾರ ರಾತ್ರಿ ಕಚೇರಿಯ ಶೌಚಾಲಯದ ಬಳಿ ಮೃತದೇಹ ಪತ್ತೆಯಾಗಿದೆ.
ಶೌಚಾಲಯದ ಬಳಿ ಶವ ನೋಡಿದ ಕಚೇರಿ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪೊಲೀಸರು ಇನ್ಫೋಸಿಸ್ ಉದ್ಯೋಗಿ ಇಳಯರಾಜನನ್ನು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ.