ಸಹೋದರಿಯ ದುರಂತದಿಂದ ನನ್ನ ಮಗ ಸಾಕಷ್ಟು ನೊಂದಿದ್ದಾನೆ. ಆದರೆ, ಆ ನೋವು ಅವನ ಕನಸನ್ನು ನಾಶ ಮಾಡಲಿಲ್ಲ. ಇದೀಗ ನನ್ನ ಪುತ್ರ ಪೈಲಟ್ ಆಗಿದ್ದಾನೆ. ಇದಕ್ಕೆ ಕಾರಣ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎಂದು ನಿರ್ಭಯಾ ತಾಯಿ ಆಶಾ ದೇವಿಯವರು ಹೇಳಿದ್ದಾರೆ.
ನಿರ್ಭಯಾ ದುರಂತದ ಬಳಿಕ ನನ್ನ ಪುತ್ರ ಸಾಕಷ್ಟು ನೊಂದಿದ್ದ. ಈ ವೇಳೆ ರಾಹುಲ್ ಗಾಂಧಿಯವರು ಪುತ್ರನಿಗೆ ಸಾಕಷ್ಟು ಸಾಮಾಧಾನ ಹೇಳಿದ್ದರು, ತನ್ನ ಗುರಿ ತಲುಪಲು ಪ್ರೇರಣೆ ನೀಡಿದ್ದರು. ಶಾಲೆ ಮುಗಿದ ಬಳಿಕ ಪೈಲಟ್ ತರಬೇತಿ ಪಡೆಯುವಂತೆ ಸಲಹೆ ನೀಡಿದ್ದರು. 2013ರಲ್ಲಿ ಬರೇಲಿಯಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿಯಲ್ಲಿ ಪ್ರವೇಶ ಸಿಕ್ಕಿತ್ತು. ಪುತ್ರ ಓದುತ್ತಿದ್ದ ಸಂದರ್ಭದಲ್ಲಿಯೇ ರಾಹುಲ್ ಆವರು ಅವನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದರು. 18 ತಿಂಗಳ ಪೈಲಟ್ ತರಬೇತಿ ಸಂದರ್ಭದಲ್ಲಿ ರಾಹುಲ್ ಅವರೇ ಪುತ್ರನಿಗೆ ಸಾಕಷ್ಟು ಪ್ರೇರಣೆ ನೀಡಿದ್ದರು. ಹಿಂದಕ್ಕೆ ಸರಿಯದಂತೆ ಪ್ರೋತ್ಸಾಹ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ.
ಇದಲ್ಲದೆ, ಪ್ರಿಯಾಂಕಾ ಗಾಂಧಿ-ವಾದ್ರಾ ಅವರು ಕೂಡ ನಮ್ಮ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು.
ರಾಹುಲ್ ಆವರ ಪ್ರೋತ್ಸಾಹ ಹಾಗೂ ಧೈರ್ಯ ತುಂಬಿದ್ದರಿಂದ ನನ್ನ ಪುತ್ರ ಇದೀಗ ಗುರುಗ್ರಾಮ್'ನ ವಾಣಿಜ್ಯ ಏರ್ ಲೈನ್ಸ್ ನಲ್ಲಿ ಅಂತಿಮ ಪೈಲಟ್ ತರಬೇತಿ ಪಡೆಯುತ್ತಿದ್ದಾನೆ. ಇನ್ನೂ ಕೆಲವೇ ದಿನಗಳಲ್ಲಿ ತರಬೇತಿ ಪೂರ್ಣಗೊಳ್ಳಲಿದ್ದು, ಶೀಘ್ರವೇ ನನ್ನ ಪುತ್ರ ವಿಮಾನ ಹಾರಿಸಲಿದ್ದಾನೆ. ನಮ್ಮ ಕುಟುಂಬದ ಕನಸನ್ನು ನನಸು ಮಾಡಿರುವ ರಾಹುಲ್ ಗಾಂಧಿಯವರಿದೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.