ಭೋಪಾಲ್ ನಗರದ ಹಬೀಬ್ಗಂಜ್ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಯುವತಿ ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ 19 ವರ್ಷದ ಯುವತಿ ವಿಧಿಶಾ ಮೂಲದವಳಾಗಿದ್ದು, ಆಕೆಯ ತಂದೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಎಸ್ಸಿ ವಿದ್ಯಾರ್ಥಿನಿಯಾಗಿರುವ ಯುವತಿ ಎಂಪಿ ನಗರದ ಕೋಚಿಂಗ್ ಸೆಂಟರ್ನಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಳು. ತವರು ವಿದಿಶಾಗೆ ತೆರಳಲು ಹಬೀಬ್ ಗಂಜ್ ರೈಲು ನಿಲ್ದಾಣಕ್ಕೆ ಬರುತ್ತಿದ್ದರು. ನಿಲ್ದಾಣದಲ್ಲಿ ಒಂಟಿಯಾಗಿದ್ದ ಯುವತಿಯನ್ನು ಕಂಡ ದುಷ್ಕರ್ಮಿಗಳು ಸಂಜೆ 6:30ರ ವೇಳೆಗೆ ಆಕೆಯನ್ನು ಅಡ್ಡಗಟ್ಟಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸೆಳೆಯುವ ಯತ್ನ ಮಾಡಿದ್ದಾರೆ. ಈ ವೇಳೆ ಅದಕ್ಕೆ ಯುವತಿ ಪ್ರತಿರೋಧ ಒಡ್ಡಿದಾಗ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದ ಇಬ್ಬರು ಆಕೆಯನ್ನು ಕಟ್ಟಿಹಾಕಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಮತ್ತಿಬ್ಬರು ಕೂಡ ಅತ್ಯಾಚಾರ ಎಸಗಿ ಬಳಿಕ ಆಕೆಯ ಉಸಿರುಗಟ್ಟಿಸಿ ಕೊಲ್ಲಲು ಯತ್ನಿಸಿದ್ದಾರೆ.