ಸೆಪ್ಟೆಂಬರ್ ತಿಂಗಳಿನಿಂದ 20 ರಾಜ್ಯಗಳಲ್ಲಿ ಮನ್ರೇಗಾ ವೇತನ ಬಿಡುಗಡೆಯಾಗಿಲ್ಲ!

2017-18ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಉದ್ದೇಶಿತ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಅತೀ ಹೆಚ್ಚು ನಿಧಿ ಬಿಡುಗಡೆಯಾದ ಹೊರತಾಗಿಯೂ ಕಳೆದ ಸೆಪ್ಟೆಂಬರ್ ನಿಂದ ಯೋಜನೆಯ ಫಲಾನುಭವಿಗಳಿಗೆ ವೇತನ ಬಿಡುಗಡೆಯಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: 2017-18ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಉದ್ದೇಶಿತ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಅತೀ ಹೆಚ್ಚು ನಿಧಿ ಬಿಡುಗಡೆಯಾದ ಹೊರತಾಗಿಯೂ ಕಳೆದ ಸೆಪ್ಟೆಂಬರ್  ನಿಂದ ಯೋಜನೆಯ ಫಲಾನುಭವಿಗಳಿಗೆ ವೇತನ ಬಿಡುಗಡೆಯಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಪ್ರಸ್ತುತ ಮಾಧ್ಯಮಗಳಿಗೆ ದೊರೆತಿರುವ ಸರ್ಕಾರದ ಅಧಿಕೃತ ಮಾಹಿತಿಗಳ ಅನ್ವಯ ದೇಶದ 20 ರಾಜ್ಯಗಳ ಫಲಾನುಭವಿಗಳಿಗೆ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ವೇತನ ಬಿಡುಗಡೆಯಾಗಿಲ್ಲ. ಅಸ್ಸಾಂ, ಕರ್ನಾಟಕ, ಪಂಜಾಬ್,  ತಮಿಳುನಾಡು, ಹರಿಯಾಣ, ಯುಪಿ, ಛತ್ತೀಸ್ಗಢ, ರಾಜಸ್ಥಾನ, ಪಶ್ಚಿಮ ಬಂಗಾಳ, ಜಾರ್ಖಂಡ್, ಕೇರಳ, ಒಡಿಶಾ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಬಿಹಾರ ಮತ್ತು ಪುದುಚೇರಿ ರಾಜ್ಯಗಳಲ್ಲಿ ಸೆಪ್ಟೆಂಬರ್ ತಿಂಗಳ ಮೊದಲೆರಡು  ವಾರಗಳಲ್ಲಿ ವೇತನ ಬಿಡುಗಡೆಯಾಗಿದ್ದು ಬಳಿಕ ಕಾರಣಾಂತರಗಳಿಂದಾಗಿ ವೇತನ ಜಾರಿಗೆ ತಡೆ ನೀಡಲಾಗಿದೆ ಎಂದು ಹೇಳಲಾಗಿದೆ.
ಅಸ್ಸಾಂ ನಲ್ಲಿ ಕೊನೆಯಬಾರಿಗೆ ಯೋಜನೆಯಡಿಯಲ್ಲಿ ಸೆಪ್ಟೆಂಬರ್ 6 ರಂದು ವೇತನ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ ಸೆಪ್ಟೆಂಬರ್ 7ರಂದು ಕೊನೆಯ ಬಾರಿಗೆ ವೇತನ ಬಿಡುಗಡೆಯಾಗಿದೆ. ಇನ್ನು ಪಂಜಾಬ್ ನಲ್ಲಿ ಸೆ.11,  ರಾಜಸ್ತಾನದಲ್ಲಿ ಸೆ,14ರಂದು ವೇತನ ಬಿಡುಗಡೆ ಮಾಡಲಾಗಿದೆ. ಇದಾದ ಬಳಿಕ ಶೇ.90ರಷ್ಟು ವೇತನವನ್ನು ತಡೆಯಲಾಗಿದ್ದು, ಮಹಾರಾಷ್ಟ್ರ, ತ್ರಿಪುರಸ ಮಧ್ಯ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಅಕ್ಟೋಬರ್ ತಿಂಗಳಿನಿಂದಲೇ  ವೇತನ ಜಾರಿಗೆ ತಡೆ ಹಾಕಲಾಗಿದೆ. 
ಮನ್ರೇಗಾ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುವ ವೇತನವನ್ನು ಹಲವು ಹಂತಗಳಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಪ್ರಮುಖವಾಗಿ ಹಣ ವರ್ಗಾವಣೆ ಆದೇಶ ಘಟಕ(FTO)ದಿಂದ ಮೊದಲಿಗೆ ಬಿಡುಯಾಗುವ ವೇತನ  ಕುರಿತ ಕಡತಗಳನ್ನು ಬಳಿಕ ರಾಜ್ಯ ಮಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಇದಕ್ಕೆ ಕೇಂದ್ರ-ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS)ಯಿಂದ ಅನುಮೋದನೆ ಅಗತ್ಯವಿದ್ದು, ಬಳಿಕ ನೋಡಲ್  ಮನ್ರೇಗಾ ಬ್ಯಾಂಕ್ ಗಳಿಗೆ ವೇತನ ಜಮೆಯಾಗುತ್ತದೆ. ಒಂದು ವೇಳೆ PFMS ನಿಂದ ವೇತನ ಜಾರಿ ಮನವಿಗೆ ಸ್ಪಂಧನೆ ದೊರೆಯದಿದ್ದರೆ, ಆಗ ಎಫ್ ಟಿಒ ಕೂಡ ಆ ಕಡತಗಳನ್ನು ಬಾಕಿ ಉಳಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ  ಬಹುಶಃ ವೇತನ ಜಾರಿ ವಿಳಂಬವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿರುವ ನರೇಗಾ ಹಕ್ಕು ಸಂಘಟನೆ ಸಂಘರ್ಷ್ ಮೋರ್ಚಾ, ಯೋಜನೆಯ ಫಲಾನುಭವಿಗಳಿಗೆ ಬರಬೇಕಿದ್ದ ಸುಮಾರು 3,066 ರು. ಕೋಟಿ ವೇತನ ಕಳೆದ ಅಕ್ಟೋಬರ್ 20ರಿಂದ  ಬಾಕಿ ಉಳಿದಿದೆ. ಆದರೆ ಇದು ಕೇಂದ್ರ ಸರ್ಕಾರದಿಂದ ಉಂಟಾದ ವಿಳಂಬವಲ್ಲ ಬದಲಿಗೆ ಆಯಾ ರಾಜ್ಯ ಸರ್ಕಾರಗಳಿಂದ ಉಂಟಾಗಿರುವ ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೂಡ ಸ್ಪಷ್ಟನೆ ನೀಡಿದ್ದು, ಆಕ್ಟೋಬರ್ 27ರಂದೇ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಚಿವಾಲಯ ವೇತನ ಬಿಡುಗಡೆ ಕುರಿತು ಸ್ಪಷ್ಟನೆ ನೀಡಿದೆ. ಎಫ್ ಟಿಒ ಗಳ ವೇತನ ಬಿಡುಗಡೆ  ಕುರಿತ ಕಡತಗಳ ವಿಲೇವಾರಿಯನ್ನು ಶೇ.43.6ರಿಂದ ಶೇ.84.9ಕ್ಕೆ ಏರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಡ ಫಲಾನುಭವಿಗಳಿಗೆ ಸರಿಯಾದ ಸಂದರ್ಭದಲ್ಲಿ ವೇತನ ಜಾರಿ ಮಾಡಲು ಕ್ರಮ ಕೈಗೊಂಡಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com