ವಿಮಾ ಪಾಲಿಸಿಗಳಿಗೂ ಆಧಾರ್ ಜೋಡಣೆ ಕಡ್ಡಾಯ: ಐಆರ್ ಡಿಎ

ಕೇಂದ್ರ ಸರ್ಕಾರ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಜೋಡಣೆ ಕಡ್ಡಾಯಗೊಳಿಸಿದ ಬೆನ್ನಲ್ಲೇ ಎಲ್ಲ ವಿಮಾ ಪಾಲಿಸಿಗಳ ಜತೆ ಆಧಾರ್ ನಂಬರ್ ಜೋಡಣೆ ಮಾಡುವುದು ಕಡ್ಡಾಯ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ ಡಿಎಐ) ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಜೋಡಣೆ ಕಡ್ಡಾಯಗೊಳಿಸಿದ ಬೆನ್ನಲ್ಲೇ ಎಲ್ಲ ವಿಮಾ ಪಾಲಿಸಿಗಳ ಜತೆ ಆಧಾರ್ ನಂಬರ್ ಜೋಡಣೆ ಮಾಡುವುದು ಕಡ್ಡಾಯ ಎಂದು  ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ ಡಿಎಐ) ಹೇಳಿದೆ.
ಈ ಬಗ್ಗೆ ಸಂಸ್ಥೆಯ ಸೂಚನೆ ಬಿಡುಗಡೆ ಮಾಡಿರುವ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, "ಯುನಿಕ್ ಐಡೆಂಟಿಟಿ ನಂಬರ್ ಅಥವಾ ಆಧಾರ್ ಸಂಖ್ಯೆಯನ್ನು ಎಲ್ಲ ವಿಮಾ ಪಾಲಿಸಿಗಳ ಜೊತೆ ಲಿಂಕ್ ಮಾಡುವುದು  ಕಡ್ಡಾಯ. ಎಲ್ಲ ವಿಮಾ ಕಂಪೆನಿಗಳು ಈ ಶಾಸನಬದ್ಧ ಅಗತ್ಯತೆಗೆ ಬದ್ಧವಾಗಿರಬೇಕು. ಹಣಕಾಸು ಅವ್ಯವಹಾರ (ದಾಖಲೆಗಳ ನಿರ್ವಹಣೆ) ತಡೆ ಎರಡನೇ ತಿದ್ದುಪಡಿ ನಿಯಮಾವಳಿ-2017ರ ಅನ್ವಯ ಆಧಾರ್ ಸಂಖ್ಯೆಯನ್ನು ಜೋಡಣೆ  ಮಾಡುವುದು ಕಡ್ಡಾಯ" ಎಂದು ಹೇಳಿದೆ.
ಈ ಹಿಂದೆ ಐಆರ್ ಡಿಎ ಹಾಲಿ ಇರುವ ಎಲ್ಲ ವಿಮಾ ಪಾಲಿಸಿಗಳಿಗೆ ಆಧಾರ್ ಸಂಪರ್ಕವನ್ನು ಕಡ್ಡಾಯಗೊಳಿಸಿತ್ತು. ಪ್ಯಾನ್ ಸಂಖ್ಯೆ ಹಾಗೂ ನಮೂನೆ 60ನ್ನು ನೀಡಿದಲ್ಲಿ ಮಾತ್ರ ಹಣಕಾಸು ಸೇವೆಗಳನ್ನು ಪಡೆಯಲು ಸಾಧ್ಯ ಎಂದು  ಕೇಂದ್ರ ಸರ್ಕಾರ ಕಳೆದ ಜೂನ್‌ ನಲ್ಲಿ ಅಧಿಸೂಚನೆ ಜಾರಿಗೊಳಿಸಿತ್ತು. ಇದೀಗ ನಿಯಂತ್ರಣ ಪ್ರಾಧಿಕಾರ ಎಲ್ಲ ಸಾಮಾನ್ಯ ವಿಮೆ ಮತ್ತು ಜೀವವಿಮಾ ಕಂಪೆನಿಗಳಿಗೆ ಸೂಚನೆ ನೀಡಿ, ಈ ಶಾಸನಾತ್ಮಕ ಬದ್ಧತೆಯನ್ನು ಯಾವುದೇ  ವಿಳಂಬವಿಲ್ಲದೇ ಪೂರ್ಣಗೊಳಿಸಬೇಕು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com