ನೊಯ್ಡಾ: ಪಾರ್ಕಿಂಗ್ ಸ್ಥಳದಿಂದ ವೇಗವಾಗಿ ಹೊರಬಂದ ಕಾರೊಂದು ದಂಪತಿಗಳ ಮೇಲೆ ಹರಿದಿದ್ದು, ಪರಿಣಾಮ 8 ತಿಂಗಳ ಗರ್ಭಿಣಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆಯೊಂದು ನೊಯ್ಡಾದಲ್ಲಿ ಭಾನುವಾರ ರಾತ್ರಿ ನಡೆದಿದೆ.
ನೊಯ್ಡಾ ಸೆಕ್ಟರ್-18ರ ಮಾರುಕಟ್ಯೆಲ್ಲಿ ಶಾಂಪಿಗ್ ಮಾಡುವ ಸಲುವಾಗಿ ದಂಪತಿಗಳು ಬಂದಿದ್ದರು. ಈ ವೇಳೆ ದುರಂತ ಸಂಭವಿಸಿದೆ.
ಅಪಘಾತ ನಡೆದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡಿದ್ದ ದಂಪತಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಮಹಿಳೆ ಸಾವನ್ನಪ್ಪಿದ್ದರು ಎಂದು ವೈದ್ಯರು ಹೇಳಿದ್ದಾರೆ.
ಪಾರ್ಕಿಂಗ್ ನಲ್ಲಿದ್ದ ಸಿಬ್ಬಂದಿ ಕಾರನ್ನು ಪಾರ್ಕ್ ಮಾಡುತ್ತಿದ್ದ ಸಂದರ್ಭದಲ್ಲಿ ಕಾರಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದ. ಈ ವೇಳೆ ದಂಪತಿಗಳ ಮೇಲೆ ಕಾರು ಹರಿದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಸಮೇತ ಚಾಲಕನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಮಹಿಳೆ ಜೊತೆಯಿದ್ದ ಆಕೆಯ ಪತಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.