ಜೈಲಿನಲ್ಲಿ ರಾಮ್ ರಹೀಮ್ ಐಷಾರಾಮಿ ಜೀವನ ನಡೆಸುತ್ತಿದ್ದಾನೆ: ಸಹ ಕೈದಿ ಆರೋಪ

ಸ್ವಯಂ ಘೋಷಿತ ದೇವಮಾನವ ಡೇರಾ ಸಚ್ಚಾ ಸೌದದ ಮುಖ್ಯಸ್ಥ, ಅತ್ಯಾಚಾರಿ ರಾಮ್ ರಹೀಮ್ ಸಿಂಗ್ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆಂದು ಸಹ ಕೈದಿಯೊಬ್ಬರು ಮಂಗಳವಾರ ಆರೋಪಿಸಿದ್ದಾರೆ...
ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ ಸಿಂಗ್
ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ ಸಿಂಗ್
ರೊಹ್ಟಕ್: ಸ್ವಯಂ ಘೋಷಿತ ದೇವಮಾನವ ಡೇರಾ ಸಚ್ಚಾ ಸೌದದ ಮುಖ್ಯಸ್ಥ, ಅತ್ಯಾಚಾರಿ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆಂದು ಸಹ ಕೈದಿಯೊಬ್ಬರು ಮಂಗಳವಾರ ಆರೋಪಿಸಿದ್ದಾರೆ. 
ಜಾಮೀನಿನ ಮೇಲೆಗೆ ಜೈಲಿನಿಂದ ಹೊರ ಬಂದಿರುವ ರಾಹುಲ್ ಜೈನ್ ಎಂಬುವವರು ಈ ಆರೋಪವನ್ನು ಮಾಡಿದ್ದಾರೆ. 
ಜೈಲಿನಲ್ಲಿರುವ ಅಧಿಕಾರಿಗಳು ಉಳಿದ ಕೈದಿಗಳನ್ನು ನೋಡುತ್ತಿರುವಂತೆ ರಾಮ್ ರಹೀಮ್ ನನ್ನು ನೋಡುತ್ತಿಲ್ಲ, ರಾಮ್ ರಹೀಮ್ ಗಾಗಿ ಅಧಿಕಾರಿಗಳು ವಿಶೇಷ ವ್ಯವಸ್ಥೆಗಳನ್ನು ನೀಡಿದ್ದಾರೆಂದು ಹೇಳಿದ್ದಾರೆ. 
ರಾಮ್ ರಹೀಮ್ ಜೈಲಿಗೆ ಬಂದ ಬಳಿಕ ಜೈಲಿನಲ್ಲಿದ್ದ ನೀತಿ ಹಾಗೂ ನಿಯಮಗಳೇ ಬದಲಾಗಿವೆ. ರಾಮ್ ರಹೀಮ್ ಇರುವ ಜೈಲು ಕೊಠಡಿಗೆ ಬೇರಾರು ಪ್ರವೇಶ ಮಾಡುವಂತಿಲ್ಲ. ಜೈಲಿನಲ್ಲಿ ಗುರ್ಮಿತ್ ನನ್ನು ಇದೂವರೆಗೂ ಯಾರೂ ನೋಡಿಯೇ ಇಲ್ಲ. ರಾಮ್ ರಹೀಮ್ ಹೊರಗೆ ಹೋಗುವಾಗ ಬೇರಾವುದೇ ಕೈದಿಗಳನ್ನು ಹೊರಗೆ ಬಿಡುವುದಿಲ್ಲ. ಜೈಲಿನಲ್ಲಿರುವ ಕ್ಯಾಂಟೀನ್ ಗುರ್ಮಿತ್ ಒಬ್ಬನೇ ಹೋಗಿ ನೀರು, ಹಾಲು ಹಾಗೂ ಜ್ಯೂಸ್ ತೆಗೆದುಕೊಂಡು ಬರುತ್ತಾರೆ. ಗುರ್ಮಿತ್ ಜೈಲಿಗೆ ಬಂದ ಬಳಿಕ ಉಳಿದ ಕೈದಿಗಳಿಗೆ ನೀಡಲಾಗುತ್ತಿರುವ ಸಾಮಾನ್ಯ ಸೌಲಭ್ಯಗಳೂ ಕೂಡ ದೊರಕುತ್ತಿಲ್ಲ. 
ಗುರ್ಮಿತ್ ಜೈಲಿಗೆ ಬಂದ ಬಳಿಕ ಪ್ರತೀಯೊಬ್ಬ ಕೈದಿಯೂ ಸಮಸ್ಯೆಯನ್ನು ಎದುರಿಸುವಂತಾಗಿದೆ. ಗುರ್ಮಿತ್ ಜೈಲಿಗೆ ಬರುವುದಕ್ಕೂ ಮುನ್ನ ನಾವು ಜೈಲಿನ ಆವರಣದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡು ಇರುತ್ತಿದ್ದೆವು. ಆಹಾರ ಕೂಡ ಉತ್ತಮ ಗುಣಮಟ್ಟದ್ದಾಗಿತ್ತು. ಇದೀಗ ಎಲ್ಲವೂ ಬದಲಾಗಿದೆ. ನಮಗೆ ನೀಡಲಾಗುತ್ತಿ ಸಾಮಾನ್ಯ ಸೌಲಭ್ಯಗಳಾದ ಬಟ್ಟೆ ಹಾಗೂ ಚಪ್ಪಲಿಗಳು ಬರುವುದು ಸ್ಥಗಿತಗೊಂಡಿದೆ. ನಮ್ಮ ಜೊತೆಗಿದ್ದ ಕೈದಿ ಅಶೋಕ್ ಎಂಬಾತ ನ್ಯಾಯಾಧೀಶರ ಬಳಿ ಸಮಸ್ಯೆಯನ್ನು ಹೇಳಿಕೊಂಡಿದ್ದ. ಬಳಿಕ ಸೌಲಭ್ಯ ನೀಡುವುದು ನಿಧಾನಗತಿಯಲ್ಲಿ ಆರಂಭವಾಯಿತು. 
ಜೈಲಿನಲ್ಲಿ ಆಗುತ್ತಿರುವ ತಾರತಮ್ಯ ಕುರಿತಂತೆ ಕೈದಿಗಳು ಪ್ರತಿಭಟನೆಗಳನ್ನೂ ನಡೆಸಿದ್ದಾರೆ. ಆದರೂ, ಪರಿಸ್ಥಿತಿಗಳು ಬದಲಾಗಲಿದ್ದ. ಗುರ್ಮಿತ್ ಕೆಲಸ ಮಾಡುತ್ತಿದ್ದಾನೆಂದು ಜೈಲಿನ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಅವನು ಕೆಲಸ ಮಾಡುತ್ತಿರುವುದನ್ನು ಈ ವರೆಗೂ ಯಾರೊಬ್ಬರೂ ನೋಡಿಯೇ ಇಲ್ಲ. ಗುರ್ಮಿತ್ ನನ್ನು ನೋಡುವುದಕ್ಕೆ ಬರುವವರಿಗೆ 2 ಗಂಟೆಗಳವರೆಗೂ ಸಮಯ ನೀಡುತ್ತಾರೆ. ಆದರೆ, ನಮ್ಮಂಥಹ ಸಾಮಾನ್ಯ ಕೈದಿಗಳನ್ನು ಭೇಟಿಯಾಗಲು ಯಾರಾದರೂ ಬಂದರೆ 20 ನಿಮಿಷಕ್ಕಿಂತ ಹೆಚ್ಚು ಸಮಯ ನೀಡುವುದಿಲ್ಲ. ಗುರ್ಮಿತ್ ಗಾಗಿಯೇ ಪ್ರತಿನಿತ್ಯ ಐಷಾರಾಮಿ ವಾಹನವೊಂದರಲ್ಲಿ ಊಟ ಬರುತ್ತದೆ ಎಂದು ಆರೋಪಿಸಿದ್ದಾರೆ. 
ಆ.25 ರಂದು ಗುರ್ಮಿತ್ ರಾಮ್ ರಹೀಮ್ ಸಿಂಗ್ ನನ್ನು ಸಿಬಿಐ ವಿಶೇಷ ನ್ಯಾಯಾಲಯ ತಪ್ಪಿತಸ್ಥನೆಂದು ಘೋಷಿಸಿತ್ತು. ಬಳಿಕ 2 ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಖಂಡಿಸಿ ಹರಿಯಾಣ ರಾಜ್ಯದ ಪಂಚಕುಲದಲ್ಲಿ ನಡೆದ ಗಲಭೆಯಲ್ಲಿ 41 ಜನರು ಸಾವನ್ನಪ್ಪಿ, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com