ನವದೆಹಲಿ: ಕೇರಳ ಲವ್ ಜಿಹಾದ್ ಪ್ರಕರಣದ ಪ್ರಮುಖ ಕೇಂದ್ರ ಬಿಂದುವಾಗಿರುವ ಯುವತಿ ಹಾದಿಯಾ ಭೇಟಿ ಮಾಡಲು ಅವರ ತಂದೆ ಅನುಮತಿ ನೀಡಿಲ್ಲ ಎಂದು ಕೇರಳ ಮಹಿಳಾ ಆಯೋಗ ಮಂಗಳವಾರ ಹೇಳಿದೆ.
ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಲವ್ ಜಿಹಾದ್ ಆರೋಪ ಎದುರಿಸುತ್ತಿರುವ 24 ವರ್ಷದ ಹಾದಿಯಾ ಈಗ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ.
ಕಳೆದ ನವೆಂಬರ್ 6ರಂದು ರಾಷ್ಟ್ರೀಯ ಮಹಿಳಾ ಆಯೋಗ ಹಾದಿಯಾ ತನ್ನ ಪೋಷಕರೊಂದಿಗೆ ಸುರಕ್ಷಿತವಾಗಿ ಮತ್ತು ಸಂತೋಷವಾಗಿ ಇದ್ದಾರೆ ಎಂದು ಹೇಳಿತ್ತು. ಹಾದಿಯಾ ಭೇಟಿಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಕಾರ್ಯಾಧ್ಯಕ್ಷೆ ರೇಖಾ ಶರ್ಮಾ ಅವರು, ಹಾದಿಯಾ ಆರೋಗ್ಯವಾಗಿದ್ದಾಳೆ. ಅವಳ ಮೇಲೆ ಯಾವುದೇ ಹಲ್ಲೆಯಾಗಿಲ್ಲ. ಹಾದಿಯಾ ಪೋಷಕರೊಂದಿಗೆ ಸಂತೋಷವಾಗಿದ್ದಾರೆ ಎಂದು ಹೇಳಿದ್ದರು.
ನಾಲ್ಕು ತಿಂಗಳ ಹಿಂದೆ ಶಫಿನ್ ಜಾಹನ್ ಅವರೊಂದಿಗಿನ ವಿವಾಹವನ್ನು ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್, ಹಾದಿಯಾಳನ್ನು ಅವರ ತಂದೆ ಕೆಎಂ ಅಶೋಕನ್ ಮತ್ತು ತಾಯಿ ಪೊನ್ನಮ್ಮ ಅವರೊಂದಿಗೆ ಕಳುಹಿಸಿತ್ತು. ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಕುರಿತು ಎನ್ಐಎ ತನಿಖೆ ನಡೆಸುತ್ತಿದೆ.