ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಲು 'ಕೈ' ಅಸ್ತು: ಹಾರ್ದಿಕ್ ಪಟೇಲ್

ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಲು ಕಾಂಗ್ರೆಸ್ ಪಕ್ಷ ಒಪ್ಪಿಗೆ ಸೂಚಿಸಿದೆ ಎಂದು ಪಾಟಿದಾರ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಬುಧವಾರ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಹಾರ್ದಿಕ್
ಸುದ್ದಿಗೋಷ್ಟಿಯಲ್ಲಿ ಹಾರ್ದಿಕ್
ಅಹ್ಮದಾಬಾದ್: ಗುಜರಾತ್ ಚುನಾವಣಾ ಟಿಕೆಟ್ ಹಂಚಿಕೆ ಸಂಬಂಧ ಕಾಂಗ್ರೆಸ್ ಹಾಗೂ ಪಾಟಿದಾರ್ ಸಮುದಾಯದ ನಡುವೆ ಭುಗಿಲೆದ್ದಿದ್ದ ಸಂಘರ್ಷ ಕೊನೆಗೂ ಅಂತ್ಯಗೊಂಡಿದ್ದು, ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಲು  ಕಾಂಗ್ರೆಸ್ ಪಕ್ಷ ಒಪ್ಪಿಗೆ ಸೂಚಿಸಿದೆ ಎಂದು ಪಾಟಿದಾರ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಬುಧವಾರ ಹೇಳಿದ್ದಾರೆ.
ಈ ಬಗ್ಗೆ ಅಹ್ಮದಾಬಾದ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಾರ್ದಿಕ್ ಪಟೇಲ್, ಪಾಟಿದಾರ್ ಸಮುದಾಯದ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷ ಸ್ಪಂದಿಸಿದ್ದು, ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಲು ಒಪ್ಪಿಗೆ  ಸೂಚಿಸಿದೆ. ಅದರಂತೆ ಸಂವಿಧಾನದ ಕಲಂ 46ಗೆ ತಿದ್ದುಪಡಿ ತಂದು ಮೀಸಲಾತಿ ರಹಿತ ಪಟೇಲ್ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದೆ. ಕೇವಲ ಪಟೇಲ್ ಸಮುದಾಯವಷ್ಟೇ ಅಲ್ಲದೇ ಇತರೆ ಹಿಂದುಳಿದ  ವರ್ಗಗಳಿಗೂ ಇದೇ ಮೀಸಲಾತಿ ಮುಂದುವರೆಸಲೂ ಕೂಡ ಕಾಂಗ್ರೆಸ್ ಪಕ್ಷ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದರು.
ಯಾವುದೇ ಪಕ್ಷ ಸೇರುವುದಿಲ್ಲ.. ಯಾವುದೇ ಪಕ್ಷಕ್ಕೂ ನೇರ ಬೆಂಬಲವಿಲ್ಲ..ನಮ್ಮ ಹೋರಾಟ ಬಿಜೆಪಿ ವಿರುದ್ಧ ಮಾತ್ರ
ಇದೇ ವೇಳೆ ಕಾಂಗ್ರೆಸ್ ಜೊತೆ ಮೈತ್ರಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್, ತಾವು ಯಾವುದೇ ಪಕ್ಷವನ್ನೂ ಸೇರುತ್ತಿಲ್ಲ..ಅಂತೆಯೇ ತಾವು ಯಾವುದೇ ಪಕ್ಷಕ್ಕೂ ನೇರಪ ಬೆಂಬಲ ಘೋಷಣೆ ಮಾಡಿಲ್ಲ. ತಮ್ಮ  ಹೋರಾಟವೇನಿದ್ದರೂ ಬಿಜೆಪಿ ಪಕ್ಷದ ವಿರುದ್ಧ ಮಾತ್ರ..ಹಾಗಾಗಿ ನೇರವಾಗಿ ಮತ್ತು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬೆಂಬಲ ಇರುತ್ತದೆ ಎಂದು ಹೇಳಿ ಅಡ್ಡಗೋಡೆ ಮೇಲೆ ದೀಪ ಇಟ್ಟರು. ಅಂತೆಯೇ ಕಾಂಗ್ರೆಸ್ ಪಕ್ಷ ತನ್ನ  ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಮೀಸಲಾತಿ ಫಾರ್ಮುಲಾವನ್ನು ವಿವರವಾಗಿ ತಿಳಿಸಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮಸೂದೆ ಮಂಡಿಸಲಿದೆ.
ನಾವು ಯಾರ ಬಳಿಯೂ ಟಿಕೆಟ್ ಗಾಗಿ ಬೇಡಿಕೆ ಇಟ್ಟಿರಲಿಲ್ಲ..ಅಂತೆಯೇ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಎಂದು ಹೇಳಿಲ್ಲ..ಪಾಸ್ ಸಂಘಟನೆಯಲ್ಲಿ ಯಾವುದೇ ಗೊಂದಲ ಅಥವಾ ಸಂಘರ್ಷಗಳಿಲ್ಲ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ  ಕುರಿತು  ಜನರೇ  ನಿರ್ಧರಿಸಬೇಕು.. ನಮ್ಮ ಸಮಸ್ಯೆಗಳ ಚರ್ಚಿಸುವವರ ಬಗ್ಗೆ ಮತ್ತು ಅದನ್ನು ನಿವಾರಿಸಲು ಪ್ರಯತ್ನಿಸುವವರ ಬಗ್ಗೆ ಜನ ಯೋಚನೆ ಮಾಡಬೇಕು ಎಂದು ಹೇಳಿದರು.
ಬಿಜೆಪಿಯಿಂದ ಕುದುರೆ ವ್ಯಾಪರ
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ದ ಕಿಡಿಕಾರಿದ ಹಾರ್ದಿಕ್, ಆಡಳಿತಾ ರೂಢ ಬಿಜೆಪಿ ಪಕ್ಷ  ನಮ್ಮ ಹೋರಾಟಗಾರರನ್ನು ತನ್ನತ್ತ ಸೆಳೆಯಲು ಯತ್ನಿಸಿತ್ತು. ಉತ್ತರ ಗುಜರಾತ್ ನ ಹೋರಾಟಗಾರರಿಗೆ 50 ಲಕ್ಷ ರು.ಗಳ ಆಮಿಷ  ಒಡ್ಡಲಾಗಿತ್ತು. ಬಿಜೆಪಿಗೆ ಸೋಲಿನ ಭಯ ಶುರುವಾಗಿದೆ ಇದೇ ಕಾರಣಕ್ಕೆ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಹಾರ್ದಿಕ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com