ವ್ಯಾಪಂ ಹಗರಣ: ನಿರ್ದೇಶಕ ಪಂಕಜ್‌ ತ್ರಿವೇದಿ ಸೇರಿ 592 ಮಂದಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌

ದೇಶದಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಮಧ್ಯ ಪ್ರದೇಶದ ಬಹುಕೋಟಿ ವ್ಯಾಪಂ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಗುರುವಾರ....
ಹಗರಣ ಬಯಲಿಗೆಳೆದ ಆನಂದ್ ರೈ
ಹಗರಣ ಬಯಲಿಗೆಳೆದ ಆನಂದ್ ರೈ
ನವದೆಹಲಿ: ದೇಶದಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಮಧ್ಯ ಪ್ರದೇಶದ ಬಹುಕೋಟಿ ವ್ಯಾಪಂ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಗುರುವಾರ ವ್ಯಾಪಂ ನಿರ್ದೇಶಕ ಪಂಕಜ್ ತ್ರಿವೇದಿ ಸೇರಿದಂತೆ 592 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
ಭೋಪಾಲ್ ನ ಖಾಸಗಿ ವೈದ್ಯಕೀಯ ಕಾಲೇಜಗಳ ಮೂವರು ಪ್ರವರ್ತಕರು, ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಳಿ(ವ್ಯಾಪಂ)ಯ ಮಾಜಿ ಅಧಿಕಾರಿಗಳಾದ ಪಂಕಜ್‌ ತ್ರಿವೇದಿ, ನಿತಿನ್‌ ಮೋಹಿಂದ್ರ, ಅಜಯ್‌ ಕುಮಾರ್ ಸೇನ್ ಹಾಗೂ ಸಿಕೆ ಮಿಶ್ರಾ ಸೇರಿ ಹಲವು ವೈದ್ಯಕೀಯ ಕಾಲೇಜುಗಳ ಪ್ರಮುಖರ ಹೆಸರು ಆರೋಪ ಪಟ್ಟಿಯಲ್ಲಿದೆ ಎಂದು ಸಿಬಿಐ ತಿಳಿಸಿದೆ.
ಕಳೆದ ತಿಂಗಳು ವ್ಯಾಪಂ ಹಗರಣದಿಂದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಸಿಬಿಐ ಕ್ಲೀನ್‌ ಚಿಟ್‌ ನೀಡಿತ್ತು.
ಸುಪ್ರೀಂ ಕೋರ್ಟ್‌ 2015ರ ಜುಲೈ 9ರಂದು ನೀಡಿದ ಆದೇಶದಂತೆ ಸಿಬಿಐ ಬಹುಕೋಟಿ ವ್ಯಾಪಂ ಹಗರಣದ ತನಿಖೆ ನಡೆಸುತ್ತಿದ್ದು, ಸ್ವಾಯತ್ತ ಸಂಸ್ಥೆಯಾಗಿರುವ ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಳಿಯು ನಡೆಸಿರುವ ಪ್ರವೇಶ ಪರೀಕ್ಷೆ ಮತ್ತು ನೇಮಕಾತಿಯು ‘ವ್ಯಾಪಂ’ ಹಗರಣ ಎಂದೇ ಕುಖ್ಯಾತಿ ಪಡೆದಿದೆ. 
ವೃತ್ತಿ ಶಿಕ್ಷಣ ಪ್ರವೇಶ, ವೈದ್ಯರು, ಕಾನ್‌ಸ್ಟೆಬಲ್, ಶಿಕ್ಷಕರು ಮತ್ತಿತರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರವೇಶ ಪರೀಕ್ಷೆಗಳನ್ನು ಈ ಮಂಡಳಿ ನಡೆಸಿತ್ತು. ಮಧ್ಯವರ್ತಿಗಳು ರಾಜಕಾರಣಿಗಳು ಮತ್ತು ಅಧಿಕಾರಿಗಳ ನೆರವಿನಿಂದ ನಡೆಸಿದ ಅಕ್ರಮಗಳಿಂದಾಗಿ ಅನರ್ಹರೂ ಕೂಡ ವೈದ್ಯಕೀಯ ಕಾಲೇಜು ಪ್ರವೇಶ ಪಡೆಯಲು, ಸರ್ಕಾರಿ ನೌಕರಿ ಗಿಟ್ಟಿಸಲು ಸಾಧ್ಯವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com