ದೇಶ
ಲವ್ ಜಿಹಾದ್ ಪ್ರಕರಣ: ಉಗ್ರನನ್ನು ಕುಟುಂಬಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ- ಹಾದಿಯಾ ತಂದೆ
ಕೇರಳ ಲವ್ ಜಿಹಾದ್ ಪ್ರಕರಣದ ಕೇಂದ್ರ ಬಿಂದುವಾಗಿರುವ ಯುವತಿ ಹಾದಿಯಾ ಶಿಕ್ಷಣ ಮುಗಿಸುವಂತೆ ಸೋಮವಾರ ಸುಪ್ರೀಂ ಕೋರ್ಟ್....
ನವದೆಹಲಿ: ಕೇರಳ ಲವ್ ಜಿಹಾದ್ ಪ್ರಕರಣದ ಕೇಂದ್ರ ಬಿಂದುವಾಗಿರುವ ಯುವತಿ ಹಾದಿಯಾ ಶಿಕ್ಷಣ ಮುಗಿಸುವಂತೆ ಸೋಮವಾರ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸಿದ ಹಾದಿಯಾ ತಂದೆ ಕೆಎಂ ಅಶೋಕನ್ ಅವರು, ಒಬ್ಬ ಉಗ್ರನನ್ನು ನನ್ನ ಕುಟುಂಬಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.
ಇಂದು ತಮ್ಮ ಪುತ್ರಿ ಹಾದಿಯಾ ಅಂತರ್-ಧರ್ಮೀಯ ವಿವಾಹಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವು ಸ್ಪಷ್ಟಪಡಿಸಿದ ಅಶೋಕನ್ ಅವರು, ಒಂದು ಧರ್ಮ ಮತ್ತು ಒಬ್ಬ ದೇವರ ಮೇಲೆ ನನಗೆ ನಂಬಿಕೆ ಇದೆ. ಆದರೆ ಕುಟುಂಬದಲ್ಲಿ ಭಯೋತ್ಪಾದಕರನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಹಾದಿಯಾ ಇಸ್ಲಾಮ್ ಗೆ ಮತಾಂತರಗೊಂಡ ನಂತರ ತಾನು ತೆರಳಬೇಕಿದ್ದ ಸಿರಿಯಾ ಬಗ್ಗೆ ಅವಳಿಗೆ ಯಾವುದೇ ಕಲ್ಪನೆ ಇಲ್ಲ ಎಂದು ಅಶೋಕನ್ ಹೇಳಿದ್ದಾರೆ.
ಹಾದಿಯಾ ಶಿಕ್ಷಣಕ್ಕೆ ಅಡ್ಡಿಯಾದ ಈ ಎಲ್ಲ ಕಹಿ ಘಟನೆಗಳ ಬಗ್ಗೆ ನನಗೆ ಬೇಸರವಿದೆ. ಆದರೆ ಈಗ ಆಕೆಗೆ ಶಿಕ್ಷಣ ಮುಂದುವರಿಸಲು ಕೋರ್ಟ್ ಅನುಮತಿ ನೀಡಿರುವುದು ಸಂತಸ ತಂದಿದೆ ಎಂದು ಅಶೋಕನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದೇ ವೇಳೆ ನನ್ನ ಪೋಷಕರು ನನ್ನನ್ನು ಗೃಹ ಬಂಧನದಲ್ಲಿಟ್ಟಿದ್ದಾರೆ ಎಂಬ ಹಾದಿಯಾ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅಶೋಕನ್ ಅವರು, ಮನೆಗೆ ಹೊರಗೂ ಮತ್ತು ಒಳಗೆ ಅವಳಿಗೆ ಸಂಪೂರ್ಣ ಪೊಲೀಸ್ ಭದ್ರತೆ ನೀಡಲಾಗಿತ್ತು ಎಂದಿದ್ದಾರೆ.
ನಿನ್ನೆಯಷ್ಟೇ ಲವ್ ಜಿಹಾದ್ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಶಿಕ್ಷಣ ಮುಂದುವರೆಸಲು ಹಾದಿಯಾಳನ್ನು ತಮಿಳುನಾಡಿನ ಸೇಲಂನಲ್ಲಿರುವ ಶಿವರಾಜ್ ಹೋಮಿಯೋಪಥಿ ಕಾಲೇಜ್ ಗೆ ಕರೆದುಕೊಂಡು ಹೋಗಲಿ. ಕಾಲೇಜ್ ಯುವತಿಗೆ ಹಾಸ್ಟೇಲ್ ಸೌಲಭ್ಯ ಒದಗಿಸಬೇಕು ಮತ್ತು ಕಾಲೇಜ್ ಡೀನ್ ಆಕೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಜನವರಿ ಮೂರನೇ ವಾರಕ್ಕೆ ಮುಂದೂಡಿದೆ.