ತಿರುವನಂತಪುರಂ: ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಐ ಹಿರಿಯ ನಾಯಕ ಹಾಗೂ ಮೂರು ಬಾರಿ ಸಚಿವರಾಗಿದ್ದ ಇ ಚಂದ್ರಶೇಖರನ್ ನಾಯರ್ ಅವರು ಬುಧವಾರ ಶ್ರೀ ಚಿತ್ರಾ ತಿರುನಲ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿಧನರಾಗಿದ್ದಾರೆ.
89 ವರ್ಷದ ಚಂದ್ರಶೇಖರನ್ ನಾಯರ್ ಅವರು, ಕೊವ್ಡಿಯಾರ್ ನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಐ ನಾಯಕನನ್ನು ಶ್ರೀ ಚಿತ್ರಾ ತಿರುನಲ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ಶಾಂತಿ ಕವಡಂನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಜನವರಿ 25, 1980ರಿಂದ ಅಕ್ಟೋಬರ್ 20, 1981ರ ವರೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದರು. 1987ರಲ್ಲಿ ಮತ್ತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದರು. ಅಲ್ಲದೆ 1996ರಿಂದ 2001ರ ವರೆಗೆ ಆಹಾರ ಮತ್ತು ಪ್ರವಾಸೋದ್ಯಮ ಸಚಿವರಾಗಿ ಚಂದ್ರಶೇಖರನ್ ಅವರು ಸೇವೆ ಸಲ್ಲಿಸಿದ್ದಾರೆ.