ಈ ಹಿಂದೆ ಹತರಾಗಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದ ಕಟ್ಟಡದಲ್ಲೇ ಮೂರನೇ ಉಗ್ರನನ್ನೂ ಕೂಡ ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ. ಘಟನಾ ಪ್ರದೇಶದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಅಂತ್ಯವಾಗಿದ್ದು, ಪ್ರಸ್ತುತ ಯೋಧರು ಘಟನಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಇನ್ನು ಇಂದು ಮುಂಜಾನೆ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಎಎಸ್ ಐ ಅಧಿಕಾರಿ ಹುತಾತ್ಮರಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದರು.
ಇನ್ನು ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಕುಖ್ಯಾತ ಉಗ್ರ ಸಂಘಟನೆ ಜೈಶ್ ಇ ಮೊಹಮದ್ ಹೊತ್ತಿದ್ದು, ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದೆ. ಕಳೆದ ವರ್ಷ ನಡೆದ ಉರಿ ಉಗ್ರ ದಾಳಿ ಬಳಿಕ ನಡೆದ ದೊಡ್ಡ ಪ್ರಮಾಣದ ಉಗ್ರ ದಾಳಿ ಇದಾಗಿದ್ದು, ಯೋಧರ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬೇಕಿದ್ದ ದೊಡ್ಡ ದುರಂತ ತಪ್ಪಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದೆ. ಇನ್ನು ದಾಳಿಯಿಂದಾಗಿ ಯಾವುದೇ ಸ್ಥಳೀಯ ನಾಗರಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದೂ ಸೇನೆ ಸ್ಪಷ್ಟಪಡಿಸಿದೆ.
ಇನ್ನು ಮುಂಜಾಗ್ರತಾ ಕ್ರಮವಾಗಿ ಶ್ರೀನಗರದಾದ್ಯಂತ ಹೈ ಅಲರ್ಟ್ ಘೋಷಣೆಯಾಗಿದ್ದು, ಶ್ರೀನಗರದಿಂದ ಬೇರೆ ಜಿಲ್ಲೆಗಳಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ಕಟ್ಟೆಚ್ಚರದಿಂದ ಶೋಧ ನಡೆಸಲಾಗುತ್ತಿದೆ.