ಮಲಯಾಳಂ ನಟಿ ಲೈಂಗಿಕ ದೌರ್ಜನ್ಯ ಪ್ರಕರಣ: ನಟ ದಿಲೀಪ್'ಗೆ ಕೇರಳ ಹೈಕೋರ್ಟ್ ಜಾಮೀನು

ಮಲಯಾಳಂ ನಟಿ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ನಟ ದಿಲೀಪ್ ಅವರಿಗೆ ಕೇರಳ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ...
ನಟ ದಿಲೀಪ್
ನಟ ದಿಲೀಪ್

ಕೊಚ್ಚಿ: ಮಲಯಾಳಂ ನಟಿ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ನಟ ದಿಲೀಪ್ ಅವರಿಗೆ ಕೇರಳ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಮಲಯಾಳಂ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಧಿಸಿದಂತೆ ದಿಲೀಪ್ ಅವರನ್ನು ಕಳೆದ ಜುಲೈ10 ರಂದು ಬಂಧನಕ್ಕೊಳಪಡಿಸಲಾಗಿತ್ತು. ಬಂಧನಕ್ಕೊಳಗಾದ ಬಳಿಕ ಎರಡು ಬಾರಿ ದಿಲೀಪ್ ಅವರು ಜಾಮೀನು ನೀಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು. ಎರಡೂ ಬಾರಿಯೂ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ದಿಲೀಪ್ ಅವರು ಮತ್ತೆ ಮೂರನೇ ಬಾರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. 

ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯದ ತೀರ್ಪನ್ನು ಕಾಯ್ದಿರಿಸಿತ್ತು. ಇದರಂತೆ ಇಂದು ತೀರ್ಪು ಪ್ರಕಟಿಸಿದ್ದು, ಕಠಿಣ ಷರತ್ತುಗಳ ಮೇರೆಗೆ ದಿಲೀಪ್ ಅವರಿಗೆ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ. 

ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಮುಖ ಆರೋಪಿ ಪಲ್ಸರ್ ಸುನಿಯನ್ನು ಫೆ.23ರಂದು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣ ಸಂಬಂಧ ನಟ ದಿಲೀಪ್ ಅವರನ್ನು ಸಹ ಪೊಲೀಸರು ಬಂಧನಕ್ಕೊಳಪಡಿಸಿದ್ದರು. 

ಪ್ರಕರಣ ಸಂಬಂಧ ಸುನೀಲ್ ಸೇರಿದಂತೆ ಇನ್ನಿತರೆ ಆರೋಪಿಗಳ ವಿರುದ್ಧ ಕೇರಳ ಪೊಲೀಸರು ಐಪಿಸಿ ಸೆಕ್ಸನ್ 342 (ಅಕ್ರಮ ಬಂಧನ), 366 (ಅಪಹರಣ ಅಥವಾ ಮಹಿಳೆಯ ಅಪಹರಣ), 376 (ಅತ್ಯಾಚಾರ, 506 (1) ಮತ್ತು 120 (ಬಿ) (ವಂಚನೆ)) ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com