ಇಂದು ಜಿಎಸ್ ಟಿ ಕೌನ್ಸಿಲ್ ಸಭೆ; ವಿತ್ತ ಸಚಿವ ಜೇಟ್ಲಿಯಿಂದ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಸಾಧ್ಯತೆ

ನೋಟು ನಿಷೇಧದ ಬಳಿಕ ಕುಸಿದಿರುವ ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಶುಕ್ರವಾರ ನಡೆಯಲಿರುವ ಜಿಎಸ್ ಟಿ ಕೌನ್ಸಿಲ್ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ನೋಟು ನಿಷೇಧದ ಬಳಿಕ ಕುಸಿದಿರುವ ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಶುಕ್ರವಾರ ನಡೆಯಲಿರುವ ಜಿಎಸ್ ಟಿ ಕೌನ್ಸಿಲ್ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ ಸೇರಿದಂತೆ ಆರ್ ಬಿಐ ಅಧಿಕಾರಿಗಳು, ಆರ್ಥಿಕ ವಲಯದ ದಿಗ್ಗಜರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಚರ್ಚಿಸಿ  ಮಹತ್ವ ನಿರ್ಧಾರ ಕೈಗೊಳ್ಳಲ್ಲಿದ್ದಾರೆ. ನಿನ್ನೆಯಷ್ಟೇ ಪ್ರಧಾನಿ ಮೋದಿ, ಅರುಣ್ ಜೇಟ್ಲಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಷಾ ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ನವದೆಹಲಿಯಲ್ಲಿ ತುರ್ತು ಸಭೆ ನಡೆಸಿ ಚರ್ಚಿಸಿದ್ದರು. ದೇಶದ ಆರ್ಥಿಕತೆ  ನಿಧಾನಗತಿಯಲ್ಲಿರುವ ಬಗ್ಗೆ ಆರ್‌ ಬಿಐನ ವಿಶ್ಲೇಷಣೆ ಮತ್ತು ಶುಕ್ರವಾರ ನಡೆಯಲಿರುವ ಜಿಎಸ್‌ ಟಿ ಸಮಿತಿ ಸಭೆಗೆ ಸಂಬಂಧಿಸಿದಂತೆ ಗುರುವಾರದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಇದರ ಬೆನ್ನಲ್ಲೇ ಇಂದು ಜಿಎಸ್ ಟಿ ಕೌನ್ಸಿಲ್ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಜೇಟ್ಲಿ ದೇಶಕ್ಕೆ ಆರ್ಥಿಕ ಉತ್ತೇಜನದ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ.  ಜಿಎಸ್‌ಟಿಯಲ್ಲಿನ ನಿಯಮಗಳು ಮತ್ತು ಕೆಲವು ಪ್ರಕ್ರಿಯೆಯ ಬಗ್ಗೆ  ಗುಜರಾತ್‌ ನ ವರ್ತಕ ಸಮುದಾಯ ಭಾರಿ ಆಕ್ಷೇಪ ವ್ಯಕ್ತಪಡಿಸಿದೆ. ಗುಜರಾತ್‌ ಮತ್ತು ಹರ್ಯಾಣದಲ್ಲಿ ಸದ್ಯದಲ್ಲೇ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ಚುನಾವಣೆ ಘೋಷಣೆಯಾಗುವ ಮುನ್ನವೇ ಜಿಎಸ್‌ ಟಿ ಬಗೆಗಿನ  ಅಸಮಾಧಾನವನ್ನು ಹೋಗಲಾಡಿಸುವ ಅಗತ್ಯವಿದೆ.

ಇದೇ ಕಾರಣಕ್ಕೆ ಶುಕ್ರವಾರ ಜಿಎಸ್‌ ಟಿ ಸಮಿತಿ ಸಭೆ ಮಹತ್ವ ಪಡೆದು ಕೊಂಡಿದ್ದು, ಮಹತ್ವದ ಬದಲಾವಣೆಗಳು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ.

ಸಣ್ಣ, ಮಧ್ಯಮ ಗಾತ್ರದ ಉಧ್ಯಮಿಗಳಿಗೆ ದೀಪಾವಳಿ ಉಡುಗೊರೆ ಸಾಧ್ಯತೆ
ಏತನ್ಮಧ್ಯೆ ಜಿಎಸ್ ಟಿ ಜಾರಿಯಿಂದಾಗಿ ತೀವ್ರ ಹಿನ್ನಡೆ ಕಂಡಿರುವ ಸಣ್ಣ, ಮಧ್ಯಮ ಗಾತ್ರದ ಉಧ್ಯಮಿಗಳಿಗೆ ಕೇಂದ್ರ ಸರ್ಕಾರ ದೀಪಾವಳಿ ಉಡುಗೊರೆ ನೀಡುವ ಸಾಧ್ಯತೆ ಇದ್ದು, ಈ ವಿಭಾಗದ ಉದ್ಯಮದ ಮೇಲಿನ ಜಿಎಸ್ ಟಿ  ಪ್ರಮಾಣವನ್ನು ತಗ್ಗಿಸುವ ಮತ್ತು ಈ ವಿಭಾಗದ ಉಧ್ಯಮಿಗಳಿಗೆ ವಿಶೇಷ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದೇ ವೇಳೆ ಉತ್ಪಾದನಾ ಕ್ಷೇತ್ರದ ಅಭಿವೃದ್ಧಿ ಕುಂಠಿತ  ತಡೆಯಲೂ ವಿಶೇಷ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com