ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಹುಟ್ಟೂರು ಗುಜರಾತ್ ನ ವಡ್ನಾಗರಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಅವರನ್ನು ಸ್ಥಳೀಯ ಜನರು ವಿದ್ಯುಕ್ತವಾಗಿ ಸ್ವಾಗತಿಸಿದರು. ಗುಜರಾತ್ ಪ್ರವಾಸದ 2ನೇ ದಿನವನ್ನು ತಮ್ಮ ಹುಟ್ಟೂರಲ್ಲಿ ಕಳೆದ ಪ್ರಧಾನಿ ಮೋದಿ, ಇಲ್ಲಿ ರ್ಯಾಲಿ ನಡೆಸಿ ತಾವು ಹುಟ್ಟಿ ಬೆಳೆದ ಊರನ್ನು ನೆನಪಿಸಿಕೊಂಡುರು. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಇಡೀ ವಡ್ನಾಗರ ಸಿಂಗಾರಕೊಂಡಿತ್ತಲ್ಲದೇ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಜನರು "ಮೋದಿ ಮೋದಿ' ಎಂದು ಘೋಷಣೆ ಕೂಗುತ್ತಾ ಪ್ರಧಾನಿಯನ್ನು ಬರಮಾಡಿಕೊಂಡರು.
ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಕಾರಿನಿಂದ ಇಳಿದ ಮೋದಿ ಅವರು, ಸಾರ್ವಜನಿಕರೊಂದಿಗೆ ಸ್ವಲ್ಪ ಹೊತ್ತು ಬೆರೆತರು. ನಾನೀಗ ಈ ಮಟ್ಟ ಕ್ಕೇರಲು ಈ ಊರು ಮತ್ತು ಇಲ್ಲಿನ ಜನರೇ ಕಾರಣ. ಹುಟ್ಟೂರಿಗೆ ಆಗಮಿಸುವುದರಲ್ಲಿನ ಖುಷಿ ಬೇರೊಂದಿರಲ್ಲಿ ಇಲ್ಲ ಎಂದು ಹೇಳಿದರು. ಬಳಿಕ, ನಗರದ ಹೊರವಲಯದಲ್ಲಿ ನಿರ್ಮಿಸಲಾದ ನೂತನ ವೈದ್ಯಕೀಯ ಕಾಲೇಜಿನ ಉದ್ಘಾಟನೆಗೆಂದು ತೆರಳುವಾಗ, ದಾರಿ ಮಧ್ಯೆ ಕಾರು ನಿಲ್ಲಿಸಿದ ಪ್ರಧಾನಿ ಮೋದಿ, ತಾವು ಕಲಿತ ಶಾಲೆಗೆ ಭೇಟಿ ನೀಡಿದರು. ಬಿ.ಎನ್. ಹೈಸ್ಕೂಲ್ ನ ಮೈದಾನ ಪ್ರವೇಶಿಸಿದ ಪ್ರಧಾನಿ, ಅಲ್ಲಿನ ಮಣ್ಣನ್ನು ಹಣೆಗೊತ್ತಿಕೊಂಡರು.
ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾನು ಶಿವನ ಕೃಪೆಯಿಂದ ದೇಶದ ಸೇವೆ ಮಾಡುತ್ತಿದ್ದೇನೆ. 2001ರಿಂದಲೂ ವಿಷವನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಿದ್ದೂ ಶಿವನೇ' ಎನ್ನುವ ಮೂಲಕ ಗುಜರಾತ್ ಗಲಭೆ ನಂತರ ಅವರ ವಿರುದ್ಧ ಬಂದ ಆರೋಪಗಳನ್ನು ಪರೋಕ್ಷವಾಗಿ ಸ್ಮರಿಸಿದರು. ಇದೇ ವೇಳೆ ಈ ಹಿಂದಿನ ಯುಪಿಎ ಸರ್ಕಾರದ ಆರೋಗ್ಯ ನೀತಿಯನ್ನು ಖಂಡಿಸಿದ ಪ್ರಧಾನಿ ಮೋದಿ, "ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಅಂದರೆ 15 ವರ್ಷಗಳ ಹಿಂದೆ ದೇಶದಲ್ಲಿ ಆರೋಗ್ಯ ನೀತಿಯಿತ್ತು. ನಂತರ ಬಂದ ಸರ್ಕಾರ ಅಭಿವೃದ್ಧಿಯನ್ನು ದ್ವೇಷಿಸುವಂಥದ್ದು. ಹಾಗಾಗಿ, 15 ವರ್ಷಗಳ ನಂತರ ನಮ್ಮ ಸರ್ಕಾರವು ಆರೋಗ್ಯ ನೀತಿಯನ್ನು ಜಾರಿ ಮಾಡಬೇಕಾಯಿತು ಎಂದು ಯುಪಿಎ ಸರ್ಕಾರವನ್ನು ಟೀಕಿಸಿದರು.
ಇದೇ ವೇಳೆ ರೈತರ ಕುರಿತು ಮಾತನಾಡಿದ ಪ್ರಧಾನಿ ಮೋದಿ, ರೈತರ ಸಂಕಷ್ಟಗಳು ನನ್ನನ್ನು ಬಿಟ್ಟು ಬೇರ್ಯಾರಿಗೂ ಅರ್ಥವಾಗುವುದಿಲ್ಲ. ಹಿಂದೆಲ್ಲ ರೈತರಿಗೆ ಯೂರಿಯಾವೇ ಸಿಗುತ್ತಿರಲಿಲ್ಲ. ಆದರೆ, ಈಗ ನನ್ನ ನೇತೃತ್ವದ ಸರ್ಕಾರದಲ್ಲಿ ಯೂರಿಯಾ ಸುಲಭವಾಗಿ ಸಿಗುತ್ತಿದೆ. ಯೂರಿಯಾಗೆ ಶೇ.100ರಷ್ಟು ಕಹಿಬೇವನ್ನು ಲೇಪಿಸಲು ನಿರ್ಧರಿಸಿದೆವು. ಆಗ ಅದನ್ನು ಕೃಷಿಗಷ್ಟೇ ಬಳಸುತ್ತಾರೆ. ರಾಸಾಯನಿಕ ಫ್ಯಾಕ್ಟರಿಗಳಲ್ಲಿ ಬಳಸಲು ಆಗುವುದಿಲ್ಲ. ಈಗ ಕಹಿಬೇವು ಮಿಶ್ರಿತ ಯೂರಿಯಾವು ರೈತರಿಗೆ ಬಹಳಷ್ಟು ಅನುಕೂಲ ಕಲ್ಪಿಸಿದೆ. ಇದರಿಂದ ಭ್ರಷ್ಟಾಚಾರ ಹಾಗೂ ಸಬ್ಸಿಡಿ ಸೋರಿಕೆ ನಿಂತಿದೆ ಎಂದು ಮೋದಿ ಹೇಳಿದರು.
ಬಳಿಕ ಉದ್ನಾಗೆ ಭೇಟಿ ನೀಡಿದ ಪ್ರಧಾನಿ ಮೋದಿ ಉದ್ನಾ-ಬಿಹಾರದ ಜಯನಗರಗೆ ಸಂಪರ್ಕ ಕಲ್ಪಿಸುವ ಅಂತ್ಯೋದಯ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿದರು.