ಬಿಹೆಚ್'ಯು, ಎಎಂಯು ವಿವಿಗಳ ಹೆಸರು ಬಯಲಾಯಿಸೋಲ್ಲ ಕೇಂದ್ರ ಸ್ಪಷ್ಟನೆ

ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ ಹಾಗೂ ಬನಾರಸ್ ಹಿಂದು ವಿಶ್ವವಿದ್ಯಾಲಯ ಹೆಸರುಗಳನ್ನು ಬದಲಾಯಿಸುವ ಕುರಿತು ಯಾವುದೇ ರೀತಿಯ ಚಿಂತನೆಗಳಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ...
ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ ಹಾಗೂ ಬನಾರಸ್ ಹಿಂದು ವಿಶ್ವವಿದ್ಯಾಲಯ
ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ ಹಾಗೂ ಬನಾರಸ್ ಹಿಂದು ವಿಶ್ವವಿದ್ಯಾಲಯ

ನವದೆಹಲಿ: ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ ಹಾಗೂ ಬನಾರಸ್ ಹಿಂದು ವಿಶ್ವವಿದ್ಯಾಲಯ ಹೆಸರುಗಳನ್ನು ಬದಲಾಯಿಸುವ ಕುರಿತು ಯಾವುದೇ ರೀತಿಯ ಚಿಂತನೆಗಳಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. 

ಕೇಂದ್ರ ವಿಶ್ವವಿದ್ಯಾಲಯಗಳಲ್ಲಿನ ಅಕ್ರಮಗಳ ಬಗೆಗಿನ ದೂರುಗಳನ್ನು ಅವಲೋಕಿಸಲು ಕಳೆದ ಏಪ್ರಿಲ್ 25ರಂದು ಯುಜಿಸಿ 5 ಸಮಿತಿಗಳನ್ನು ನೇಮಕ ಮಾಡಿತ್ತು. ಈ ಐದು ಸಮಿತಿಗಳ ಪೈಕಿ ಒಂದು ಸಮಿತಿ, ಶಿಕ್ಷಣ ಸಂಸ್ಥೆಗಳು ಧರ್ಮವನ್ನು ಪ್ರತಿಬಿಂಬಿಸಬಾರದು. ಹೀಗಾಗಿ ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದಿಂದ 'ಮುಸ್ಲಿಂ' ಪದವನ್ನು ಹಾಗೂ ಬನಾರಸ್ ಹಿಂದು ವಿಶ್ವವಿದ್ಯಾಲಯದಿಂದ 'ಹಿಂದು' ಪದವನ್ನು ತೆಗೆದುಹಾಕಿ, ಅಲಿಘಡ ವಿಶ್ವವಿದ್ಯಾಲಯ ಹಾಗೂ ಬನಾರಸ್ ವಿಶ್ವವಿದ್ಯಾಲಯವೆಂದು ಬದಲಿಸಬೇಕೆಂದು ಶಿಫಾರಸು ಮಾಡಿತ್ತು. 

ಸಮಿತಿಯ ಶಿಫಾರಸು ಮಾಡಿರುವ ಹಿನ್ನಲೆಯಲ್ಲಿ ಬಿಹೆಚ್ ಯು ಹಾಗೂ ಎಎಂಯು ವಿಶ್ವವಿದ್ಯಾಲಯಗಳ ಹೆಸರನ್ನು ಬದಲಾಯಿಸಲು ಸರ್ಕಾರ ಚಿಂತನೆ ನಡೆಸುತ್ತಿವೆ ಎಂಬ ಸುದ್ದಿಗಳು ಹರಿದಾಡತೊಡಗಿದ್ದವು.

ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಹಾಗೂ ಅಭಿವೃದ್ಧಿ ಸಚಿವ ಪ್ರಕಾಶ್ ಜವಡೇಕರ್ ಅವರು, ಸರ್ಕಾರ ಈ ರೀತಿಯ ಯಾವುದೇ ಚಿಂತನೆಗಳನ್ನು ನಡೆಸುತ್ತಿಲ್ಲ. ಎಎಂಯು ಹಾಗೂ ಬಿಹೆಚ್ ಯು ಅತ್ಯಂತ ಹಳೆಯ ಸಂಸ್ಥೆಗಳಾಗಿದ್ದು, ಅವುಗಳ ಹೆಸರುಗಳ ಬಲಾವಣೆಗೆ ಸರ್ಕಾರ ಬಯಸುತ್ತಿಲ್ಲ. ವಿಶ್ವವಿದ್ಯಾಲಯಗಳ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಸಂಶೋಧನಾ ಲೆಕ್ಕಪರಿಶೋಧನೆಗಳನ್ನು ನೋಡಿಕೊಳ್ಳಲು ನಾವು ಸಮಿತಿಯೊಂದನ್ನು ರಚಿಸಿದ್ದೇವೆಂದು ಹೇಳಿದ್ದಾರೆ. 

ಸಮಿತಿಯು ಹಲವಾರು ಅಂಶಗಳ ಕುರಿತು ಅಧ್ಯಯನ ನಡೆಸಿದೆ. ಆದರೆ, ಅವರು ಏನು ಹೇಳಿದ್ದಾರೆಂದು ನಾನು ನೋಡಿಲ್ಲ. ಆ ರೀತಿಯ ಯಾವುದೇ ನಿರ್ಧಾರಗಳಿಲ್ಲ ಹಾಗೂ ವಿಶ್ವವಿದ್ಯಾಲಯಗಳ ಹೆಸರನ್ನು ಬದಲಾಯಿಸುವ ಯಾವುದೇ ಉದ್ದೇಶವೂ ಸರ್ಕಾರಕ್ಕಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com