ಲಖನೌ: ಭಾರತಕ್ಕೆ ಕೆಲಸ ಮಾಡುವ ಪ್ರಧಾನಿ ಬೇಕಾಗಿದೆಯೇ ಹೊರತು ಮಾತನಾಡುವ ಪ್ರಧಾನಿಯಲ್ಲ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
ಅಮೇಥಿಯಲ್ಲಿ ಮಾತನಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಬಿಜೆಪಿ ದೇಶಕ್ಕೆ ಮಾತನಾಡುವ ಪ್ರಧಾನಿಯನ್ನು ನೀಡಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಯಾವತಿ, ಕೆಲಸ ಮಾಡುವ ಪ್ರಧಾನಿ ಬೇಕೆ ಹೊರತು ಮಾತನಾಡುವ ಪ್ರಧಾನಿಯಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬೆಲೆ ಏರಿಕೆ ತಡೆಗೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಏನನ್ನೂ ಮಾಡುತ್ತಿಲ್ಲ, ಕೇಂದ್ರದ ಮಾದರಿಯ ಆಡಳಿತವನ್ನೇ ಉತ್ತರ ಪ್ರದೇಶದಲ್ಲೂ ಜಾರಿಗೆ ತರಲು ಬಿಜೆಪಿ ಯತ್ನಿಸುತ್ತಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷರು ಕೊನೆಗೂ ಪ್ರಧಾನಿ ಕೇವಲ ಮಾತನಾಡುತ್ತಾರೆ ಎಂಬುದನ್ನು ತಮ್ಮ ಹೇಳಿಕೆ ಮೂಲಕ ಒಪ್ಪಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಜನರೊಂದಿಗೆ ಮಾತನಾಡದೇ ತಾವೊಬ್ಬರೇ ಮತನಾಡಿ ನಿರ್ಧಾರ ಕೈಗೊಳ್ಳುವ ಪ್ರಧಾನಿ ಸಿಕ್ಕಿದ್ದಾರೆ ಎಂದು ಮಾಯಾವತಿ ಹೇಳಿದ್ದಾರೆ.