ಕೇಂದ್ರದಿಂದ ದೀಪಾವಳಿಗೆ ಬಂಪರ್ ಕೊಡುಗೆ: ಪ್ರಾಧ್ಯಾಪಕರ ವೇತನದಲ್ಲಿ ಹೆಚ್ಚಳ, ಸಚಿವ ಸಂಪುಟ ಅನುಮೋದನೆ

ಪ್ರಾಧ್ಯಾಪಕರಿಗೆ ಕೇಂದ್ರ ಸರ್ಕಾರ ಈ ಬಾರಿ ದೀಪಾವಳಿಗೆ ಬಂಪರ್ ಕೊಡುಗೆಯನ್ನು ನೀಡಿದೆ. 7ನೇ ವೇತನ ಆಯೋಗದ ಶಿಫಾರಸುಗಳನ್ನು ಕೇಂದ್ರ ಹಾಗೂ ರಾಜ್ಯ ವಿಶ್ವವಿದ್ಯಾಲಯ ಮತ್ತು ಅನುದಾನಿತ ಕಾಲೇಜುಗಳ ಬೋಧಕ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಾಧ್ಯಾಪಕರಿಗೆ ಕೇಂದ್ರ ಸರ್ಕಾರ ಈ ಬಾರಿ ದೀಪಾವಳಿಗೆ ಬಂಪರ್ ಕೊಡುಗೆಯನ್ನು ನೀಡಿದೆ. 7ನೇ ವೇತನ ಆಯೋಗದ ಶಿಫಾರಸುಗಳನ್ನು ಕೇಂದ್ರ ಹಾಗೂ ರಾಜ್ಯ ವಿಶ್ವವಿದ್ಯಾಲಯ ಮತ್ತು ಅನುದಾನಿತ ಕಾಲೇಜುಗಳ ಬೋಧಕ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವತ ಎನ್ ಡಿಎ ಸರ್ಕಾರ ದೇಶದಲ್ಲಿರುವ ಸುಮಾರು 7.5 ಲಕ್ಷಕ್ಕಿಂತಲೂ ಹೆಚ್ಚು ಕೇಂದ್ರೀಯ ಮತ್ತು ರಾಜ್ಯ ವಿಶ್ವವಿದ್ಯಾಲಯಗಳ ಶಿಕ್ಷಕರು, ಉಪನ್ಯಾಸಕರ ವೇತನ ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಿದೆ. 

ಸರ್ಕಾರದ ಈ ಆದೇಶದಿಂದ 7.58 ಲಕ್ಷ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಮತ್ತು ಇತರೆ ಬೋದಕ ಸಿಬ್ಬಂದಿಗೆ ಪ್ರಯೋಜನವಾಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜವಡೇಕರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. 

7ನೇ ವೇತನ ಆಯೋಗದ ಅನುಷ್ಠಾನದ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯ ಮತ್ತು ಕಾಲೇಜು ಪ್ರಾಧ್ಯಾಪಕರ ವೇತನ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. 106 ವಿಶ್ವವಿದ್ಯಾಲಯಗಳು ಮತ್ತು ಯುಜಿಸಿ ಅನುದಾನ ಪಡೆಯುತ್ತಿರುವ ಕಾಲೇಜುಗಳು, ಸರ್ಕಾರದಿಂದ ಅನುದಾನ ಪಡೆಯುತ್ತಿರುವ 329 ವಿಶ್ವವಿದ್ಯಾಲಯಗಳು, 12,912 ಸರ್ಕಾರಿ ಮತ್ತು ಖಾಸಗಿ ಅನುದಾನಿ ಕಾಲೇಜುಗಳ ಶಿಕ್ಷಕರು ವೇತನ ಪರಿಷ್ಕರಣೆಯ ಫಲಾನುಭವ ಪಡೆಯಲಿದ್ದಾರೆ. 

ಅಲ್ಲದೆ, ವೇತನ ಪರಿಷ್ಕರಣೆ ಕೇಂದ್ರೀಯ ಅನುದಾನಿತ 119 ತಾಂತ್ರಿಕ ಸಂಸ್ಥೆಗಳಾದ ಐಐಟಿ, ಐಐಎಸ್'ಸಿ, ಐಐಎಂ, ಐಐಐಟಿ ಮತ್ತು ಎನ್ಐಟಿಐಇಗಳಿಗೂ ಅನ್ವಯವಾಗಲಿದೆ. ವೇತನ ಪರಿಷ್ಕರಣೆ 2016 ಜ.1 ರಿಂದ ಪೂರ್ವಾನ್ವಯವಾಗಲಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ಹೆಚ್ಚವರಿಯಾಗಿ ರೂ.9,800 ಕೋಟಿ ಹೊರೆ ಬೀಳಲಿದೆ. 7ನೇ ವೇತನ ಆಯೋಗದ ಶಿಫಾರಸು ಅನುಷ್ಠಾನದ ಬಳಕ ವಿಶ್ವವಿದ್ಯಾಲಯ ಮತ್ತು ಕಾಲೇಜು ಪ್ರಾಧ್ಯಾಪಕರ ವೇತನ ರೂ. 10,400 ನಿದ ಗರಿಷ್ಠ ರೂ.49,800 ವರೆಗೆ ಏರಿಕೆಯಾಗಲಿದೆ. 

ರಾಜ್ಯ ಸರ್ಕಾರಿ ಅನುದಾನಿತ ಸಂಸ್ಥೆಗಳಿಗೆ ವೇತನ ಪರಿಷ್ಕರಣೆ ಜಾರಿಯಾಗಬೇಕಾದರೆ, ಸಂಬಂಧಿತ ರಾಜ್ಯ ಸರ್ಕಾರಗಳು ಒಪ್ಪಿಗೆ ಸೂಚಿಸುವ ಅಗತ್ಯವಿದೆ. ಆ ಬಳಿಕ ವೇತನ ಪರಿಷ್ಕರಣೆ ಅನ್ವಯವಾಗಲಿದೆ. 7ನೇ ವೇತನ ಆಯೋಗದ ಶಿಫಾರಸು ಜಾರಿಯಿಂದ ರಾಜ್ಯಗಳಿಗೆ ಆಗುವ ಹೆಚ್ಚುವರಿ ಹೊರೆಯನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ವೇತನ ಪರಿಷ್ಕರಣೆ ಕ್ರಮದಿಂದ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸುವ ನಿರೀಕ್ಷೆ ಇದೆ ಮತ್ತು ಪ್ರತಿಭಾನ್ವಿತರನ್ನು ಬೋಧನಾ ಕ್ಷೇತ್ರಕ್ಕೆ ಸೆಳೆಯಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com