ಕಪ್ಪು ಹಣದಲ್ಲಿ ತನ್ನ ಪಾಲು ನೀಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಕೇರಳ ರೈತ

ಕಳೆದ ಲೋಕಸಭೆ ಚುನಾವಣೆ ವೇಳೆ ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುವುದಾಗಿ ಮಾತು ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ....
ಕೆ ಚೇತು
ಕೆ ಚೇತು
ತಿರುವನಂತಪುರಂ: ಕಳೆದ ಲೋಕಸಭೆ ಚುನಾವಣೆ ವೇಳೆ ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುವುದಾಗಿ ಮಾತು ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ಕೇರಳದ ವಯನಾಡು ಮೂಲದ ರೈತರು ಆ ಕಪ್ಪು ಹಣದಲ್ಲಿ ತನ್ನ ಪಾಲು ನೀಡುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಮಹಂತವಾಡಿಯ 64 ವರ್ಷದ ರೈತ ಕೆ ಚೇತು ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಕಪ್ಪು ಹಣದಲ್ಲಿ ತನಗೆ ಸಿಗಬೇಕಾದ ಪಾಲಿನ ಕನಿಷ್ಠ 5 ಲಕ್ಷ ರುಪಾಯಿಗಳನ್ನಾದರೂ ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ರೆ ಬೆಳ ನಷ್ಟವಾಗಿದ್ದಕ್ಕೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ ಚುನಾವಣೆ ವೇಳೆ ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುವುದಾಗಿ ಮತ್ತು ದೇಶದ ಪ್ರತಿ ನಾಗರಿಕರ ಖಾತೆಗೆ 15 ಲಕ್ಷ ರುಪಾಯಿ ಜಮೆ ಮಾಡುವುದಾಗಿ ಭರವಸೆ ನೀಡಿದ್ದನ್ನು ಚೇತು ಅವರು ಪ್ರಧಾನಿ ಮೋದಿಗೆ ನೆನಪು ಮಾಡಿಕೊಟ್ಟಿದ್ದಾರೆ. ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ನೀವು ನಿಮ್ಮ ಚುನಾವಣಾ ಭರವಸೆಯನ್ನು ಇದುವರೆಗೂ ಈಡೇರಿಸಿಲ್ಲ. ಬದಲಾಗಿ ರೈತರ ಕೃಷಿ ಉತ್ಪನ್ನಗಳ ಬೆಲೆ ಕಡಿಮೆ ಮಾಡಿ, ಅಡಿಗೆ ಅನಿಲ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೀರಿ. ಕಪ್ಪು ಹಣದ ವಿಚಾರದಲ್ಲಿ ನೀವು ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಮತ್ತು ನನ್ನ ಖಾತೆಗೆ ಕನಿಷ್ಠ 5 ಲಕ್ಷ ರುಪಾಯಿ ಜಮೆ ಮಾಡುವಂತೆ ನಾನು ನಿಮ್ಮಲ್ಲಿ ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಎಂದು ಚೇತು ಪತ್ರ ಬರೆದಿದ್ದಾರೆ.
ಚೇತು ಅವರು ಪ್ರಧಾನಿ ಮೋದಿ 5 ಲಕ್ಷ ರುಪಾಯಿ ಜಮೆ ಮಾಡುವುದಕ್ಕಾಗಿ ತಮ್ಮ ಫೇಡರಲ್ ಬ್ಯಾಂಕ್ ಖಾತೆಯ ವಿವರ ನೀಡಿದ್ದಾರೆ.
ಇನ್ನು ಈ ಕುರಿತು ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಚೇತು ಅವರು, ಈ ಪತ್ರ ಕೇವಲ ಮೋದಿ ಮಾತ್ರ ಅನ್ವಯಿಸುವುದಿಲ್ಲ. ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದ ಎಲ್ಲ ರಾಜಕೀಯ ನಾಯಕರಿಗೂ ಅನ್ವಯಿಸುತ್ತದೆ ಎಂದಿದ್ದಾರೆ. ಒಂದು ವೇಳೆ ಅವರು ಭರವಸೆ ಈಡೇರಿಸದಿದ್ದರೆ ಜನ ಪ್ರಶ್ನೆ ಮಾಡಬೇಕು. ಆದರೆ ಜನ ಇತ್ತೀಚಿಗೆ ಪ್ರಶ್ನೆ ಮಾಡುವುದನ್ನೇ ಮರೆತು ಬಿಟ್ಟಿದ್ದಾರೆ. ನೋಟ್ ನಿಷೇಧ ಮತ್ತು ಜಿಎಸ್ ಟಿಯಿಂದಾಗಿ ಇಡೀ ದೇಶದ ಜನತೆ ಸಂಕಷ್ಟದಲ್ಲಿದ್ದರೂ ಯಾರೂ ಅದರ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಚೇತು ಅವರು ಈ ಹಿಂದೆ ತಪ್ಪು ಮಾಹಿತಿ ನೀಡುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಖ್ಯಾತ ನಟ ಮಮ್ಮುಟಿ ಅವರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಸುದ್ದಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com