ಮುಂಬೈ: ತನ್ನ ಮಿತ್ರ ಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಶಿವಸೇನೆ, ಸಾಮಾಜಿಕ ಮಾಧ್ಯಮದಲ್ಲಿನ ಟೀಕೆಗಳನ್ನು ಸಹಿಸಿಕೊಳ್ಳುವ ಶಕ್ತಿ ಕೇಸರಿ ಪಡೆಗೆ ಇಲ್ಲ ಎಂದಿದೆ.
ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಯತ್ನಿಸುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅವರನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹೀಗೆಯೇ ಟಾರ್ಗೆಟ್ ಮಾಡಲಾಗಿತ್ತು. ಅದನ್ನು ನಿಯಂತ್ರಿಸುವುದಕ್ಕಾಗಿ ಯುಪಿಎ ಸರ್ಕಾರ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯಗಳನ್ನು ನಿಯಂತ್ರಿಸುವುದಕ್ಕಾಗಿ ಮಸೂದೆ ಮಂಡಿಸಲು ಮುಂದಾಗಿತ್ತು. ಆದರೆ ಅಂದು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಇಂದು ಅದೇ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ಶಿವಸೇನೆ ತನ್ನ ಮುಖವಾಗಿ ಸಾಮ್ನಾದಲ್ಲಿ ಆರೋಪಿಸಿದೆ.
ಬಿಜೆಪಿ ಬೇರೆಯವರನ್ನು ಹಣಿಯುವುದಕ್ಕಾಗಿ ತಾನು ತೋಡಿದ ಗುಂಡಿಗೆ ಇಂದು ತಾನೇ ಬೀಳುತ್ತಿದೆ. ಪ್ರತಿಪಕ್ಷಗಳ ಮಾನ ಕಳೆಯಲು ಬಿಜೆಪಿ ಬಳಿಸಿದ್ದ ಸಾಮಾಜಿಕ ಮಾಧ್ಯಮ ಈಗ ಅವರಿಗೆ ತಿರುಗುಬಾಣವಾಗಿದೆ. ತಮ್ಮ ವಿರುದ್ಧ ಮಾತಾನಾಡುವವ ಯುವಕರನ್ನು ಜೈಲಿಗೆ ತಳ್ಳಲಾಗುತ್ತಿದೆ ಎಂದು ಶಿವಸೇನೆ ವಾಗ್ದಾಳಿ ನಡೆಸಿದೆ.
ಬಿಜೆಪಿ ಅಭಿವ್ಯಕ್ತಿ ಸ್ವಾತಂತ್ರ ನಿಯಂತ್ರಿಸಲು ಕಾನೂನು ತರುತ್ತಿದ್ದು, ಯುವಕರು ಸಾಮಾಜಿಕ ಮಾಧ್ಯಮಗಳನ್ನು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಸಾಮ್ನಾ ಸಂಪಾದಕೀಯದಲ್ಲಿ ಎಚ್ಚರಿಕೆ ನೀಡಲಾಗಿದೆ.