ಹೈದರಾಬಾದ್: ಹೈದರಾಬಾದ್ ನ ಔಟರ್ ರಿಂಗ್ ರೋಡ್ ನ ಪೊದೆಗಳಲ್ಲಿ ಮಂಗಳವಾರ ಮೂವರು ಮಹಿಳೆಯರು ಹಾಗೂ ಎರಡು ವರ್ಷದ ಒಂದು ಮಗು ಸೇರಿದಂತೆ ಒಂದೇ ಕುಟುಂಬದ ಐವರ ಮೃತದೇಹಗಳು ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸೈಬರಾಬಾದ್ ಪೊಲೀಸರ ಪ್ರಕಾರ, ಮೃತರು ಪ್ರಭಾಕರ್ ರೆಡ್ಡಿ(30), ಪುತ್ರ ವಶಿಸ್ಟ್(2), ಪತ್ನಿ ಮಾದೇವಿ(26), ಆಂಟಿ ಲಕ್ಷ್ಮಿ(42) ಹಾಗೂ ಅವರ ಪುತ್ರಿ ಸಿಂಧುಜಾ(16) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಸಂಗಾರೆಡ್ಡಿ ಜಿಲ್ಲೆಯ ಅಮೀನಪುರ್ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಮಾದೇವಿ ಹಾಗೂ ಲಕ್ಷ್ಮಿ ಮತ್ತು ಸಿಂಧುಜಾ ಅವರ ಮೃತದೇಹ ರಸ್ತೆ ಬದಿಯ ಪೊದೆಯಲ್ಲಿ ಪತ್ತೆಯಾಗಿದ್ದು, ಪ್ರಭಾಕರ್ ರೆಡ್ಡಿ ಮತ್ತು ಆತನ ಪುತ್ರನ ದೇಹ ಕಾರಿನಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಮೃತರ ದೇಹಗಳ ಮೇಲೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಹೀಗಾಗಿ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಪುಷ್ಠಿ ನೀಡುವಂತೆ ಸ್ಥಳದಲ್ಲಿ ವಿಷ ಮಿಶ್ರಿತ ಕೇಕ್ ಹಾಗೂ ಸಾಫ್ಟ್ ಡ್ರಿಂಕ್ಸ್ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಪ್ರಭಾಕರ್ ರೆಡ್ಡಿ ಅವರು ಹೈದರಾಬಾದ್ ನ ಆರ್ ಸಿ ಪುರಂನ ಅಶೋಕ್ ನಗರದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಆದರೆ ವ್ಯವಹಾರದಲ್ಲಿ ನಷ್ಟ ಉಂಟಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಪ್ರಭಾಕರ್ ರೆಡ್ಡಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.