ಹರ್ದೋಯ್: ಅಯೋಧ್ಯೆಯಲ್ಲಿ ಶ್ರೀರಾಮನ ವಿಚಾರವನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜಕೀಯ ಮಾಡುತ್ತಿದ್ದಾರೆಂದು ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ವಾಲ್ ಅವರು ಗುರುವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಅಯೋಧ್ಯೆಯಲ್ಲಿ ಶ್ರೀರಾಮನ ವಿಚಾರವನ್ನು ರಾಜಕೀಯ ಮಾಡುತ್ತಿರುವುದನ್ನು ಇಡೀ ದೇಶವೇ ನೋಡುತ್ತಿದೆ. ರಾಮನ ಹೆಸರಿನಲ್ಲಿ ಉತ್ತರಪ್ರದೇಶ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಿದರೆ, ಜನರು ಅದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಯೋಗಿ ಅದಿತ್ಯನಾಥ್ ಅವರು ಅಧಿಕಾರಕ್ಕೆ ಬಂದ 7 ತಿಂಗಳಲ್ಲಿ 2 ತಿಂಗಳು ಗೋರಖ್ಪುರದಲ್ಲಿಯೇ ಇದ್ದರು. ಉತ್ತರಪ್ರದೇಶ ರಾಜ್ಯದ ಬಗ್ಗೆ ಅವರಿಗೆ ಎಷ್ಟು ಕಾಳಜಿ ಇದೆ ಎಂಬುದು ಇದರಲ್ಲಿಯೇ ತಿಳಿಯಬಹುದಾಗಿದೆ ಎಂದು ತಿಳಿಸಿದ್ದಾರೆ.