ಬಿಹಾರ ಪೊಲೀಸ್ ಠಾಣೆಯಲ್ಲಿ ಗಲಭೆ: ಪ್ರತಿಭಟನಾಕಾರ ಸಾವು, ನಾವು ಶೂಟ್ ಮಾಡಿಲ್ಲ ಎಂದ ಪೊಲೀಸರು

ಕೇಂದ್ರ ಬಿಹಾರದ ಸಮಸ್ತಿಪುರ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಶುಕ್ರವಾರ ಗಲಭೆ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದು,....
ಪೊಲೀಸ್ ಠಾಣೆ ಬಳಿ ಪ್ರತಿಭಟನಾಕಾರರು
ಪೊಲೀಸ್ ಠಾಣೆ ಬಳಿ ಪ್ರತಿಭಟನಾಕಾರರು
ಪಾಟ್ನಾ: ಕೇಂದ್ರ ಬಿಹಾರದ ಸಮಸ್ತಿಪುರ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಶುಕ್ರವಾರ ಗಲಭೆ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದು, ಘಟನೆಯಲ್ಲಿ ಓರ್ವ ಪ್ರತಿಭಟನಾಕಾರ ಮೃತಪಟ್ಟಿದ್ದಾರೆ. ಆದರೆ ನಾವು ಗುಂಡು ಹಾರಿಸಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ಕಳೆದ ಬುಧವಾರ ರಾತ್ರಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಸಮಸ್ತಿಪುರ್ ಜಿಲ್ಲೆಯ ತೇಜ್ ಪುರ ಪೊಲೀಸರ ವಿರುದ್ಧ ಸುಮಾರು 300ಕ್ಕು ಹೆಚ್ಚು ಮಂದಿ ಇಂದು ಪ್ರತಿಭಟನೆ ನಡೆಸುತ್ತಿದ್ದರು. 
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾರೆ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿರ್ ಜಾವೇದ್, ಎಸ್ ಡಿಪಿಒ ಅಶೋಕ್ ಕುಮಾರ್ ಮಂಡಲ್ ಸೇರಿದಂತೆ ಕನಿಷ್ಠ 15 ಪೊಲೀಸರು ಹಾಗೂ 12 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಆದರೆ ಪೊಲೀಸರ ಗುಂಡಿನಿಂದ ಪ್ರತಿಭಟನಾಕಾರ ಮೃತಪಟ್ಟಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಪೊಲೀಸ್ ಠಾಣೆಯಲ್ಲಿದ್ದ ಹಲವು ಕಾರು ಮತ್ತು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಲ್ಲದೆ ಪೊಲೀಸಾ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ 20 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಲಭೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಗುಂಡಿನಿಂದಾಗಿ ಪ್ರತಿಭಟನಾಕಾರ ಮೃತಪಟ್ಟಿದ್ದಾರೆ ಎಂಬ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಸಮಸ್ತಿಪುರ್ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ರಂಜನ್ ಅವರು, ಪ್ರತಿಭಟನಾಕಾರರ ಬಳಿಯೂ ಗನ್ ಗಳಿದ್ದವು. ಆಕಸ್ಮಿಕವಾಗಿ ಅವರ ಗನ್ ನಿಂದ ಗುಂಡು ಹಾರಿ ಯುವಕ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಕಳೆದ ಬುಧವಾರ ರಾತ್ರಿ ಔಷಧಿ ವಿತರಕ ಜನಾರ್ಧನ್ ಥಾಕೂರ್(55) ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಆದರೆ ಇದುವರೆಗೂ ಆರೋಪಿಗಳನ್ನು ಬಂಧಿಸದ ಪೊಲೀಸರು ವಿರುದ್ಧ ಇಂದು ಪ್ರತಿಭಟನೆ ನಡೆಸಲಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com