ಗುಜರಾತ್ ಪಟೇಲ್ ಚಳುವಳಿಗೆ ಹಿನ್ನಡೆ; ಬಿಜೆಪಿ ಸೇರಿದ ಇಬ್ಬರು ಹಾರ್ದಿಕ್ ಪಟೇಲ್ ಸಹವರ್ತಿಗಳು

ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಭೇಟಿಗೂ ಮುನ್ನವೇ ಹಾರ್ದಿಕ್ ಪಟೇಲ್ ನೇತೃತ್ವದ ಪಟೇಲ್ ಚಳುವಳಿಗೆ ಹಿನ್ನಡೆಯಾಗಿದ್ದು, ಈ ಹಿಂದೆ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಪ್ರಮುಖ ಹೋರಾಟಗಾರರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಭೇಟಿಗೂ ಮುನ್ನವೇ ಹಾರ್ದಿಕ್ ಪಟೇಲ್ ನೇತೃತ್ವದ ಪಟೇಲ್ ಚಳುವಳಿಗೆ ಹಿನ್ನಡೆಯಾಗಿದ್ದು, ಈ ಹಿಂದೆ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಪ್ರಮುಖ  ಹೋರಾಟಗಾರರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಗುಜರಾತ್ ನ ಪಟೇಲ್ ಚಳುವಳಿಗೆ ಇದೀಗ ತೀವ್ರ ಹಿನ್ನಡೆಯಾಗಿದ್ದು, ಚಳುವಳಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಹಾರ್ದಿಕ್ ಪಟೇಲ್ ಆಪ್ತರಾದ ವರುಣ್ ಪಟೇಲ್ ಹಾಗೂ  ರೇಷ್ಮಾ ಪಟೇಲ್ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಶನಿವಾರ ಗುಜರಾತ್ ನ ಬಿಜೆಪಿ ಮುಖಂಡರ ಉಪಸ್ಥಿತಿಯಲ್ಲಿ ಇಬ್ಬರೂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಈ ವೇಳೆ ಹಾರ್ದಿಕ್ ಪಟೇಲ್ ವಿರುದ್ಧ ಕಿಡಿಕಾರಿದ್ದಾರೆ.
"ಹಾರ್ದಿಕ್ ಪಟೇಲ್ ಕಾಂಗ್ರೆಸ್ ಏಜೆಂಟ್, ಆತನಿಂದ ಸಮುದಾಯಕ್ಕೆ ಯಾವುದೇ ರೀತಿಯ ಲಾಭವಿಲ್ಲ"
ಇನ್ನು ಬಿಜೆಪಿ  ಪಕ್ಷ ಸೇರ್ಪಡೆ ಬಳಿಕ ಪಟೇಲ್ ಚಳುವಳಿಯ ಮುಖ್ಯಸ್ಥ ಹಾರ್ದಿಕ್ ಪಟೇಲ್ ವಿರುದ್ದ ಕಿಡಿಕಾರಿರುವ ವರುಣ್ ಪಟೇಲ್ ಹಾಗೂ ರೇಷ್ಮಾ ಪಟೇಲ್, ಹಾರ್ದಿಕ್ ಓರ್ವ ಕಾಂಗ್ರೆಸ್ ಏಜೆಂಟ್ ಆಗಿದ್ದಾನೆ ಎಂದು ಕಿಡಿಕಾರಿದ್ದಾರೆ.  ಅಲ್ಲದೆ ಆತನಿಂದ ಸಮುದಾಯಕ್ಕೆ ಯಾವುದೇ ರೀತಿಯ ಲಾಭವಿಲ್ಲ ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಪಟೇಲ್ ಸಮುದಾಯದ ಚಳುವಳಿಗೆ ಬೆಂಬಲ ನೀಡಿದ್ದರು. ಅಲ್ಲದೆ ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ  ಕೋರಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದ ಹಿಂದುಳಿದ ಸಮುದಾಯದ ಮುಖಂಡ ಅಲ್ಪೇಶ್ ಠಾಕೂರ್ ಅವರು, ಸೋಮವಾರ ನಡೆಯಲಿರುವ ತಮ್ಮ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಅಹ್ವಾನ ನೀಡಿದ್ದರು. ಇದರ  ಬೆನ್ನಲ್ಲೇ ವರುಣ್ ಪಟೇಲ್ ಹಾಗೂ ರೇಷ್ಮಾ ಪಟೇಲ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾರ್ದಿಕ್, ಶತಪದಿ ಹುಳುವಿನ ಒಂದೆರಡು ಕಾಲುಗಳನ್ನು ಕತ್ತರಿಸಿದರೂ ಅದು ವೇಗವಾಗಿ ನಡೆಯುವ ಸಾಮರ್ಥ್ಯವನ್ನು ಹೊಂದಿದೆ. ಅಂತೆಯೇ ನಾನೂ ಕೂಡ ನನ್ನ ಬೆಂಬಲಿಗರೊಂದಿಗೆ  ಹೋರಾಟ ಮುಂದುವರೆಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com