ಡಿಸೆಂಬರ್ 9, 14ರಂದು ಗುಜರಾತ್ ವಿಧಾನಸಭಾ ಚುನಾವಣೆ: ಚುನಾವಣಾ ಆಯೋಗ

ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭೆ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಡಿಸೆಂಬರ್ 9 ಮತ್ತು 14ರಂದು ಎರಡು ಹಂತಗಳಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಯ ಮತದಾನ ನಡೆಯಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭೆ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಡಿಸೆಂಬರ್ 9 ಮತ್ತು 14ರಂದು ಎರಡು ಹಂತಗಳಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಯ ಮತದಾನ ನಡೆಯಲಿದೆ.
ಗುಜರಾತ್ ಚುನಾವಣಾ ದಿನಾಂಕ ಘೋಷಣೆಯನ್ನು ವಿಳಂಬ ಮಾಡುವ ಮೂಲಕ ಚುನಾವಣಾ ಆಯೋಗವು ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ ಆರೋಪಗಳ ನಡುವೆಯೇ ಇಂದು ಕೇಂದ್ರ ಚುನಾವಣಾ ಆಯೋಗ ಗುಜರಾತ್  ವಿಧಾನಸಭೆ ಚುನಾವಣೆಯನ್ನು ಘೋಷಣೆ ಮಾಡಿದೆ. ಅದರಂತೆ ಒಟ್ಟು ಎರಡು ಹಂತಗಳಲ್ಲಿ ಗುಜರಾತ್ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯಲಿದ್ದು, ಡಿಸೆಂಬರ್ 9 ರಂದು ಮತ್ತು ಡಿಸೆಂಬರ್ 14ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಹಿಂದೆ ಘೋಷಣೆ ಮಾಡಿದಂತೆ ಡಿಸೆಂಬರ್ 18 ರಂದೇ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಬುಧವಾರ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜ್ಯೋತಿ ಅವರು ಮಾಹಿತಿ ನೀಡಿದ್ದು, 182 ಸದಸ್ಯ ಬಲದ ಗುಜರಾತ್ ವಿಧಾನಸಭೆ ಚುನಾವಣೆ ಎರಡು ಹಂತದಲ್ಲಿ ನಡೆಯಲಿದ್ದು, ಡಿಸೆಂಬರ್ 9 ರಂದು ಮತ್ತು ಡಿಸೆಂಬರ್ 14ರಂದು  ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ. ಅಂತೆಯೇ ಗುಜರಾತ್ ರಾಜ್ಯದಲ್ಲಿ 4.30 ಕೋಟಿ ಮತದಾರರಿದ್ದು, 50,128 ಮತಗಟ್ಟೆ ಸ್ಥಾಪಿಸಲಾಗುತ್ತದೆ. ಬುಧವಾರದಿಂದಲೇ ಗುಜರಾತ್‌ ನಲ್ಲಿ ಚುನಾವಣಾ ನೀತಿ  ಸಂಹಿತೆ ಜಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಹಾಗೂ ಮತ ಎಣಿಕೆ ದಿನಾಂಕ ಘೋಷಿಸಿದ 13 ದಿನಗಳ ಬಳಿಕ ಗುಜರಾತ್ ಚುನಾವಣೆಯ ದಿನಾಂಕ ಘೋಷಿಸಲಾಗಿದ್ದು, ಗುಜರಾತ್ ವಿಧಾನಸಭೆಯ ಅಧಿಕಾರದ ಅವಧಿ ಮುಂದಿನ  ವರ್ಷ ಜನವರಿ 23ಕ್ಕೆ ಕೊನೆಗೊಳ್ಳಲಿದೆ.
ಹಿಮಾಚಲಪ್ರದೇಶ ಚುನಾವಣೆಯ ದಿನಾಂಕ ಪ್ರಕಟಿಸಿದ ದಿನವೇ ಗುಜರಾತ್ ಚುನಾವಣೆಯ ದಿನಾಂಕ ಪ್ರಕಟಿಸದ ಚುನಾವಣಾ ಆಯೋಗದ ವಿರುದ್ಧ ಪ್ರತಿಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರ  ತವರು ರಾಜ್ಯವಾಗಿರುವುದರಿಂದ ಗುಜರಾತ್ ನಲ್ಲಿ ಚುನಾವಣೆ ಘೋಷಣೆ ಮಾಡಲು ಆಯೋಗ ಮೀನಾಮೇಷ ಎಣಿಸುತ್ತಿದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು. ಆಯೋಗದ ಈ ನಿರ್ಧಾರದಿಂದಾಗಿ ಗುಜರಾತ್ ನಲ್ಲಿ ಬಿಜೆಪಿ ಹಲವು  ಯೋಜನೆಗಳನ್ನು ಘೋಷಿಸಲು ನೆರವಾಗಿದೆ ಎಂದೂ ಆರೋಪಿಸಿದ್ದವು. 
ಹಿಮಾಚಲಪ್ರದೇಶ ಚುನಾವಣೆಯ ದಿನಾಂಕ ಪ್ರಕಟ ವೇಳೆ ಚುನಾವಣಾ ಆಯೋಗ ಎರಡೂ ರಾಜ್ಯಗಳ ಮತ ಎಣಿಕೆ ಡಿ.18 ರಂದು ನಡೆಯಲಿರುವುದಾಗಿ ಘೋಷಿಸಿತ್ತು.
ಯಾವುದೇ ಪಕ್ಷಕ್ಕೂ ಆಯೋಗ ನೆರವು ನೀಡಿಲ್ಲ: ಆಯೋಗ ಸ್ಪಷ್ಟನೆ
ಇದೇ ವೇಳೆ ಗುಜರಾತ್ ಚುನಾವಣಾ ದಿನಾಂಕ ಘೋಷಣೆಯನ್ನು ವಿಳಂಬ ಮಾಡುವ ಮೂಲಕ ಚುನಾವಣಾ ಆಯೋಗವು ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿರುವ ಆಯೋಗ, ಕೇಂದ್ರ ಸರ್ಕಾರಕ್ಕಾಗಲಿ ಅಥವಾ ಬಿಜೆಪಿಗಾಗಲಿ ಯಾವುದೇ ವಿಶೇಷ ಮಾನ್ಯತೆ ನೀಡಿಲ್ಲ, ಅಂತೆಯೇ ಯಾರ ನಿರ್ದೇಶನದಂತೆಯೂ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳಿಗೂ ಆಯೋಗದ ಸಮಾನ ಅವಕಾಶ ನೀಡುತ್ತದೆ. ನಿನ್ನೆ ಮೋದಿ ಗುಜರಾತ್ ಗೆ ತೆರಳಿದ್ದರು. ಇಂದು ರಾಹುಲ್ ಗಾಂಧಿ ಹೋಗಿದ್ದಾರೆ. ಇದಕ್ಕೂ ಆಯೋಗಕ್ಕೂ ಸಂಬಂಧವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com