ಗುಜರಾತ್ ನಲ್ಲಿ ಮೋದಿ ಅತ್ಯುತ್ತಮ ಸಿಎಂ, 6ನೇ ಬಾರಿಗೂ ಬಿಜೆಪಿಗೇ ಜಯ: ಖಾಸಗಿ ಸಮೀಕ್ಷೆ

ಖಾಸಗಿ ವಾಹಿನಿಯ ಸಮೀಕ್ಷೆಯೊಂದು ಗುಜರಾತ್ ನಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಭೂತಪೂರ್ವ ಜಯ ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಅಹ್ಮದಾಬಾದ್: ಗುಜರಾತ್ ನಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಪ್ರಸ್ತುತ ಘೋಷಣೆಯಾಗಿರುವ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆಯಾಗಬಹುದ ಎಂಬ ಚರ್ಚೆಗಳ ನಡುವೆಯೇ ಖಾಸಗಿ ವಾಹಿನಿಯ ಸಮೀಕ್ಷೆಯೊಂದು  ಗುಜರಾತ್ ನಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಭೂತಪೂರ್ವ ಜಯ ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ.
ಖಾಸಗಿ ಸುದ್ದಿವಾಹಿನಿ ಟೈಮ್ಸ್ ನೌ ಮತ್ತು ವಿಎಂಆರ್ ಸಮೀಕ್ಷೆ ಸಂಸ್ಥೆಗಳು ಜಂಟಿಯಾಗಿ ಗುಜರಾತ್ ನಲ್ಲಿ ಜನಾಭಿಪ್ರಾಯ ಸಂಗ್ರಹಸಿದ್ದು, ಇಂದು ಈ ಸಮೀಕ್ಷೆಯ ವರದಿಯನ್ನು ಬಹಿರಂಗ ಪಡಿಸಿದೆ. ಅದರಂತೆ ಈಗಲೂ ಗುಜರಾತ್  ನಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿ ಹೋದ ನರೇಂದ್ರ ಮೋದಿ ಅವರೇ ಅತ್ಯುತ್ತಮ ಸಿಎಂ ಎಂದು ಜನರು ಅಭಿಪ್ರಾಯಪಟ್ಟಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಯೇ ಗೆದ್ದು ಅಧಿಕಾರದ ಗದ್ದುಗೆ ಏರಲಿದೆ ಎಂದು  ಹೇಳಲಾಗಿದೆ.
2012ರ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಚುನಾವಣೆ ಬಿಜೆಪಿ ಸುಲಭ ಜಯ ನೀಡುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಗುಜರಾತ್ ನ ಒಟ್ಟು 182 ವಿಧಾನಸಭಾ ಕ್ಷೇತ್ರ ಫೈಕಿ ಬಿಜೆಪಿ 118ರಿಂದ  134 ಸ್ಥಾನಗಳಲ್ಲಿ ಸುಲಭವಾಗಿ ಜಯ ಸಾಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 2012ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ115 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಅಂದಿನ ಚುನಾವಣೆಯಲ್ಲಿ  ಕಾಂಗ್ರೆಸ್ 61 ಸ್ಥಾನಗಳಿಗೆ ಕುಸಿದು ಮುಖಭಂಗ ಅನುಭವಿಸಿತ್ತು.
2012ಕ್ಕಿಂತಲೂ ಕಾಂಗ್ರೆಸ್ ಕನಿಷ್ಠ ಸ್ಥಾನ
ಇನ್ನು ಸಮೀಕ್ಷೆಯಲ್ಲಿ ಹೇಳಿರುವಂತೆ ಕಾಂಗ್ರೆಸ್ ಪಕ್ಷ ಪ್ರಸಕ್ತ ಚುನಾವಣೆಯಲ್ಲಿ 2012ರಲ್ಲಿ ತಾನು ಗೆದ್ದ ಸ್ಥಾನಗಳಿಗಿಂತಲೂ ಇನ್ನೂ ಕಡಿಮೆ ಸ್ಥಾನಗಳಿಗೆ ಕಾಂಗ್ರೆಸ್ ಕುಸಿಯುವ ಸಾಧ್ಯತೆ ಇದ್ದು, 2017ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೇವಲ 49- 61 ಸ್ಥಾನಗಳು ಮಾತ್ರ ಲಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇವಲ ಸ್ಥಾನಗಳು ಮಾತ್ರವಲ್ಲ, ಮತ ಹಂಚಿಕೆಯಲ್ಲೂ ಕಾಂಗ್ರೆಸ್ ಗೆ ಹಿನ್ನಡೆಯಾಗುವ ಸಾಧ್ಯತೆ ಇದ್ದು, ಕಾಂಗ್ರೆಸ್ ಪಕ್ಷದ ಮತ ಹಂಚಿಕೆ ಶೇ.39ರಿಂದ ಶೇ.37ಕ್ಕೆ   ಕುಸಿಯುವ ಸಾಧ್ಯತೆ ಇದೆ. ಅಂತೆಯೇ ಬಿಜೆಪಿ ಪಕ್ಷದ ಮತ ಹಂಚಿಕೆಯಲ್ಲಿ ಶೇ.4ರಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಶೇ.48ರಿಂದ ಶೇ,52ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಗುಜರಾತ್ ನಲ್ಲಿ ಮೋದಿಯೇ ಅತ್ಯುತ್ತಮ ಸಿಎಂ
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ದೆಹಲಿಗೆ ತೆರಳಿದ್ದರೂ, ಗುಜರಾತ್ ಜನತೆ ಮಾತ್ರ ಅವರನ್ನು ಇಂದಿಗೂ ಅತ್ಯುತ್ತಮ ಸಿಎಂ ಎಂದೇ ಪರಿಗಣಿಸಿದ್ದಾರೆ. ಮೋದಿ ಬಳಿಕ ಒಟ್ಟು ಇಬ್ಬರು ಮುಖ್ಯಮಂತ್ರಿಗಳು ಗುಜರಾತ್  ರಾಜ್ಯವನ್ನಾಳಿದ್ದು, ವಿಜಯ್ ರುಪಾನಿ, ಆನಂದಿ ಬೆನ್ ಪಟೇಲ್ ಅವರು ಮುಖ್ಯಮಂತ್ರಿಗಳಾಗಿದ್ದರು. ಆದರೆ ಇವರಿಬ್ಬರ ಹೊರತಾಗಿಯೂ ಗುಜರಾತ್ ಜನತೆ ನರೇಂದ್ರ ಮೋದಿ ಅವರನ್ನೇ ಅತ್ಯುತ್ತಮ ಮುಖ್ಯಮಂತ್ರಿ ಎಂದು  ಗುರುತಿಸಿದ್ದಾರೆ. ಮೋದಿ ಪರ ಒಟ್ಟು ಶೇ.67ರಷ್ಟು ಮತಗಳು ಲಭಿಸಿದ್ದರೆ, ಆನಂದಿಬೆನ್ ಪಟೇಲ್ ಪರವಾಗಿ ಶೇ. 20 ಮತ್ತು ಹಾಲಿ ಸಿಎಂ ವಿಜಯ್ ರುಪಾನಿ ಪರ ಶೇ.13ರಷ್ಟು ಮತಗಳು ಬಂದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಮೀಕ್ಷೆ ವೇಳೆ ಮತದಾರರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬೃಹತ್ ವಿಗ್ರಹ ಸ್ಥಾಪನೆ ಗುಜರಾತ್ ರಾಜ್ಯದ ಗೌರವನ್ನು  ಹೆಚ್ಚಿಸುತ್ತದೆಯೇ ಎಂಬುದಕ್ಕೆ ಶೇ.46ರಷ್ಟು ಮಂದಿ ಹೌದು ಎಂದು ಹೇಳಿದ್ದರೆ, ಶೇ.32ರಷ್ಟು ಮಂದಿ ಇದೊಂದು ಚುನಾವಣಾ ಗಿಮಿಕ್ ಎಂದು ಹೇಳಿದ್ದಾರೆ. ಅಂತೆಯೇ ಶೇ.22ರಷ್ಟು ಮಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಪ್ರಸಕ್ತ ಪರಿಸ್ಥಿತಿಯಲ್ಲಿ ಅಧಿಕಾರ ರಚನೆ ಮಾಡಲು ಯಾವ ಪಕ್ಷ ಶಕ್ತವಾಗಿದೆ ಎಂಬ ಪ್ರಶ್ನೆಗೆ ಶೇ.50ರಷ್ಟು ಮಂದಿ ಬಿಜೆಪಿಗೆ ಮತ ಹಾಕಿದ್ದು, 44ರಷ್ಟು ಮಂದಿ ಕಾಂಗ್ರೆಸ್ ಮತ ಹಾಕಿದ್ದಾರೆ. ಅಂತೆಯೇ ರಾಹುಲ್ ಗಾಂಧಿ ಹಾರ್ದಿಕ್  ಪಟೇಲ್ ಬೆಂಬಲ ಘೋಷಿಸಬೇಕೇ ಎಂಬ ಪ್ರಶ್ನೆಗೆ ಶೇ.41ರಷ್ಟು ಮಂದಿ ಹಾರ್ದಿಕ್ ರಾಜಕೀಯದಿಂದ ದೂರವಿರಬೇಕು ಎಂದು ಹೇಳಿದ್ದಾರೆ. ಅಂತೆಯೇ ಶೇ.28ರಷ್ಟು ಮಂದಿ ಹೌದು ಎಂದು ಹೇಳಿದ್ದರೆ, ಬಿಜೆಪಿಯೊಂದಿಗೆ ಸೇರಬೇಕು  ಎಂದು ಶೇ.19ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com