ಅಯೋಧ್ಯೆ ವಿವಾದ: ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥಕ್ಕೆ ರವಿಶಂಕರ್ ಗುರೂಜಿ ಭರವಸೆ

ಅಯೋಧ್ಯೆಯಲ್ಲಿನ ರಾಮಮಂದಿರ, ಬಾಬ್ರಿ ಮಸೀದಿ ವಿವಾದ ನ್ಯಾಯಾಲಯದಲ್ಲಿ ಅಂತಿಮ ಹಂತದ ವಿಚಾರಣೆ ಬಂದಿರುವಾಗಲೇ, ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಮುಂದಾಗಿದ್ದಾರೆಂದು...
ಅಯೋಧ್ಯೆ ಮತ್ತು ಶ್ರೀ ರವಿಶಂಕರ್ ಗುರೂಜಿ (ಸಂಗ್ರಹ ಚಿತ್ರ)
ಅಯೋಧ್ಯೆ ಮತ್ತು ಶ್ರೀ ರವಿಶಂಕರ್ ಗುರೂಜಿ (ಸಂಗ್ರಹ ಚಿತ್ರ)
ನವದೆಹಲಿ: ಅಯೋಧ್ಯೆಯಲ್ಲಿನ ರಾಮಮಂದಿರ, ಬಾಬ್ರಿ ಮಸೀದಿ ವಿವಾದ ನ್ಯಾಯಾಲಯದಲ್ಲಿ ಅಂತಿಮ ಹಂತದ ವಿಚಾರಣೆ ಬಂದಿರುವಾಗಲೇ, ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ. 
ಈ ಕುರಿತಂತೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿರುವ ಅವರು, ರಾಮಮಂದಿರ ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಧನಾತ್ಮಕ ಅಂಶಗಳು ಕಂಡುಬಂದಿದೆ. ಅಯೋಧ್ಯೆ ವಿವಾದವನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳುವ ನಿಟ್ಟಿನಿಂದ ಎಲ್ಲಾ ಹಕ್ಕುದಾರರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಒಮ್ಮತ ಮೂಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. 
ಎರಡೂ ಸಮುದಾಯಗಳು ಉದಾರತೆ ಪ್ರದರ್ಶಿಸಲು ಮತ್ತು ಪರಸ್ಪರ ಹತ್ತಿರವಾಗಲು ಇದೊಂದು ಅವಕಾಶವಾಗಿದೆ. ನಾವು ನ್ಯಾಯಾಲಯದ ಆದೇಶವನ್ನು ಎದುರು ನೋಡುತ್ತಾ ಕೂತರೆ ಈ ಅವಕಾಶವನ್ನು ಕಳೆದುಕೊಳ್ಳುತ್ತೇವೆ. ಸುದೀರ್ಘ ಸಮಯದಿಂದ ಅಯೋಧ್ಯೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ವಿವಾದವನ್ನು ಸಾಧ್ಯವಾದಷ್ಟು ಬೇಗನೆ ಬಗೆಹರಿಸಬೇಕು ಎಂದು ಜನರು ಬಯಸಿದ್ದಾರೆ. ಜನರು ಹಿಂದಿನದನ್ನು ಮರೆತು ಪರಸ್ಪರ ಹತ್ತಿರವಾಗಲು ಬಯಸಿದ್ದಾರೆ. 
ಅಯೋಧ್ಯೆ ವಿಚಾರ ಇತ್ಯರ್ಥಕ್ಕೆ ಸಂಧಾನಕಾರನಾಗಿ ಮಧ್ಯಸ್ಥಿಕೆ ವಹಿಸಬೇಕಾದರೆ. ಅದಕ್ಕೆ ನಾನು ಸಿದ್ಧವಿದ್ದೇನೆ. ನಾವು ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಸುಪ್ರೀಂಕೋರ್ಟ್ ನಿಂದ ಪ್ರಕರಣ ಸಂಬಂಧ ತೀರ್ಪು ಪ್ರಕಟವಾಗುವುದಕ್ಕೂ ಮುನ್ನವೇ ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ. 
ಅಯೋಧ್ಯೆ ರಾಮಮಂದಿರ ವಿವಾದ ಇತ್ಯರ್ಥಕ್ಕೆ ರವಿಶಂಕರ್ ಗುರೂಜಿಯವರು ಮಧ್ಯಸ್ಥಿಕೆ ವಹಿಸುತ್ತಿರುವುದನ್ನು ಕಾಂಗ್ರೆಸ್ ಶನಿವಾರ ಕೊಂಡಾಡಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ವಡಕ್ಕನ್ ಅವರು, ಗುರೂಜಿಯವರು ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದನ್ನು ಮೆಚ್ಚಲೇಬೇಕು. ಅಯೋಧ್ಯೆ ವಿವಾದ ನ್ಯಾಯಾಲಯದ ಅಂಗಳದಲ್ಲಿದೆ. ವಿವಾದನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಬಹುದಾದರೆ, ಸಮಸ್ಯೆಯನ್ನು ಬಗೆಹರಿಸಲು ರವಿಶಂಕರ್ ಗುರೂಜಿಯವರು ಪ್ರಯತ್ನಿಸಿದೆರ, ಅದು ಸ್ವಾಗತಾರ್ಹ ಯಾರ ಮೇಲೂ ಯಾವುದೇ ಒತ್ತಡ ಹೇರದಂತೆ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ಹೇಳಿದ್ದಾರೆ. 
ಈ ನಡುವೆ ಅಯೋಧ್ಯೆ ವಿವಾದ ಇತ್ಯರ್ಥಕ್ಕಾಗಿ ರವಿಶಂಕರ್ ಗುರೂಜಿಯವರು ನಿರ್ಮೋಹಿ ಅಖಾರಾ ಮತ್ತು ಅಖಿಲ ಭಾರತೀಯ ಮುಸ್ಲಿಮರ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್'ಬಿ) ಜೊತೆಗೆ ಚರ್ಚೆ ನಡೆಸಿದ್ದಾರೆಂದು ವರದಿಗಳು ತಿಳಿಸಿದ್ದು, ಈ ವರದಿಯನ್ನು ಬಾಬ್ರಿ ಮಸೀದಿ ಕಾರ್ಯಕಾರಿ ಸಮಿತಿ ತಿರಸ್ಕರಿಸಿದೆ. 
ಬಾಬ್ರಿ ಮಸೀದಿ ಕಾರ್ಯಕಾರಿ ಸಮಿತಿ ಸದಸ್ಯ ಹಜಿ ಮೆಹಬೂಬ್ ಅವರು ಮಾತನಾಡಿ, ಹಲವು ದಿನಗಳ ಹಿಂದೆ ರವಿಶಂಕರ್ ಗುರೂಜಿ ಪರ ವ್ಯಕ್ತಿಯೊಬ್ಬರು ನಮ್ಮೊಂದಿಗೆ ಮಾತುಕತೆ ನಡೆಸಬೇಕೆಂದು ತಿಳಿಸಿದ್ದರು. ಇದನ್ನು ನಾವು ಸ್ವಾಗತಿಸಿದ್ದೆವು. ಆದರೆ, ಈವರೆಗೂ ಅವರು ಯಾವುದೇ ರೀತಿಯ ಮಾತುಕತೆಗನ್ನು ನಡೆಸಿಲ್ಲ. ಸಂದೇಶಗಳನ್ನು ರವಾನಿಸಿಲ್ಲ ಎಂದು ಹೇಳಿದ್ದಾರೆ. 
ವಿವಾದ ಇತ್ಯರ್ಥಪಡಿಸಿಕೊಳ್ಳುವಲ್ಲಿ ನಮಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಮಾತುಕತೆಗೆ ಅವರು ಬರುವುದಾದರೆ, ನಾವು ಸಿದ್ಧರಿದ್ದೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com