ಚಂಡಿಗಡ: 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಸರಿಯಾದ ವೇಳೆಗೆ ಚಿಕಿತ್ಸೆ ಸಿಗದ ಕಾರಣ 4 ದಿನಗಳ ನಂತರ ಆಕೆ ಸಾವನ್ನಪ್ಪಿರುವ ಘಟನೆ ಪಂಜಾಬ್ ನ ಫಜೀಲ್ಕಾ ಜಿಲ್ಲೆಯ ಜಲಾಲಾಬಾದ್ ನಲ್ಲಿ ನಡೆದಿದೆ.
ಈ ಮೊದಲು ಬಾಲಕಿ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ, ಸಮಾಜಕ್ಕೆ ಹೆದರಿ ಅವರು ಪ್ರಕರಣವನ್ನು ಗುಟ್ಟಾಗಿಟ್ಟಿದ್ದರು. ಜೊತೆಗೆ ಎಲ್ಲರಿಗೂ ವಿಷಯ ತಿಳಿಯುತ್ತದೆ ಎಂಬ ಭಯದಿಂದ ಆಸ್ಪತ್ರೆಗೂ ದಾಖಲಿಸಿರಲಿಲ್ಲ, ಭಾನುವಾರ ನಮಗೆ ಮಾಹಿತಿ ತಿಳಿದ ಮೇಲೆ ಕೇಸು ದಾಖಲಿಸಿರುವುದಾಗಿ ಎಸ್ ಪಿ ತಿಳಿಸಿದ್ದಾರೆ.
ಆಕೆಯ ಮೇಲೆ ದೈಹಿಕ ಹಿಂಸಾಚಾರ ನಡೆದ ನಂತರ ಮೂರು ದಿನಗಳ ಕಾಲ ಪ್ರಜ್ಞಾಹೀನಳಾಗಿದ್ದಳು, ಜಲಾಲಾಬಾದ್ ನ 9ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಆಕೆ ಶಾಲೆ ಮುಗಿಸಿ ಮನೆಗೆ ತೆರಳುವಾಗ ಅಕ್ಟೋಬರ್ 25ನೇ ತಾರೀಖಿನಂದು ಬೈಕ್ ನಲ್ಲಿ ಬಂದ ವ್ಯಕ್ತಿಗಳು ಆಕೆಯನ್ನು ಅಪಹರಿಸಿದ್ದರು.
ಶಾಲೆಯ ಪಕ್ಕದ ಮೈದಾನಕ್ಕೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ನಡೆಸಿ ಅಲ್ಲಿಂದ ಪರಾರಿಯಾಗಿದ್ದರು. ಬಾಲಕಿ ಮನೆಗೆ ಬಾರದಿದ್ದಾಗ ಗಾಬರಿಗೊಂಡ ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ, ಮೈದಾನದಲ್ಲಿ ಆಕೆ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದನ್ನು ಕಂಡು ಪೋಶಕರು ಮನೆಗೆ ಕರೆದೊಯ್ದಿದ್ದಾರೆ.
ಅತ್ಯಾಚಾರ ನಡೆಸಿದವರಲ್ಲಿ ಒಬ್ಬ ಆರೋಪಿ ತನ್ನ ಮಗಳ ಸಹಪಾಠಿ ಎಂದು ಬಾಲಕಿಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಬಾಲಕಿ ತಂದೆಯ ದೂರಿನ ಆಧಾರದ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.