ವಿಡಿಯೋ: ಜ್ವರದಿಂದ ಬಳಲುತ್ತಿದ್ದ ಮಹಿಳೆಯನ್ನು 7 ಕಿಮೀ ಹೊತ್ತು ಸಾಗಿ ಆಸ್ಪತ್ರೆ ಸೇರಿಸಿದ ಯೋಧರು!

ಭಾರತೀಯ ಸೇನೆಯ ಯೋಧರು ಮತ್ತೆ ಮಾನವೀಯತೆ ಮೆರೆದಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಮಹಿಳೆಯನ್ನು ಬರೊಬ್ಬರಿ 7 ಕಿ.ಮೀ ದೂರ ಹೊತ್ತಿಕೊಂಡೇ ಸಾಗಿ ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ಛತ್ತೀಸ್ ಘಡ ದಂತೇವಾಡದಲ್ಲಿ ನಡೆದಿದೆ.
ಮಹಿಳೆಯನ್ನು ಹೊತ್ತು ಸಾಗಿದ ಯೋಧರು
ಮಹಿಳೆಯನ್ನು ಹೊತ್ತು ಸಾಗಿದ ಯೋಧರು
ದಂತೇವಾಡ‌: ಭಾರತೀಯ ಸೇನೆಯ ಯೋಧರು ಮತ್ತೆ ಮಾನವೀಯತೆ ಮೆರೆದಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಮಹಿಳೆಯನ್ನು ಬರೊಬ್ಬರಿ 7 ಕಿ.ಮೀ ದೂರ ಹೊತ್ತಿಕೊಂಡೇ ಸಾಗಿ ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ಛತ್ತೀಸ್ ಘಡ ದಂತೇವಾಡದಲ್ಲಿ ನಡೆದಿದೆ.
ಮೂಲಗಳ ಪ್ರಕಾರ ದಂತೇವಾಡ ಬಳಿಯ ಪುಟ್ಟ ಗ್ರಾಮದಲ್ಲಿ ಮಹಿಳೆ ತೀವ್ರ ಅಸ್ವಸ್ಥಗೊಂಡ ವಿಚಾರ ತಿಳಿದ ಯೋಧರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಹಿಳೆ ಮನೆ ಇದ್ದ ಕುಗ್ರಾಮ ಬೆಟ್ಟ-ಗುಡ್ಡಗಳಿಂದ ಕೂಡಿದ್ದು, ರಸ್ತೆ ಸಂಪರ್ಕಕ್ಕೆ  ಬರೊಬ್ಬರಿ 8 ರಿಂದ 10 ಕಿ.ಮೀ ದೂರ ಸಾಗಬೇಕು. ಹೀಗಾಗಿ ಹಿಂದೆ ಮುಂದೆ ಯೋಚನೆ ಮಾಡದ ಯೋಧರು ಅಸ್ವಸ್ಥ ಮಹಿಳೆಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಬರೊಬ್ಬರಿ 7 ಕಿ.ಮೀ ದೂರ ಕಾಲ್ನಡಿಗೆಯಲ್ಲೇ ಸಾಗಿ ಆಸ್ಪತ್ರೆಗೆ ದಾಖುಲ  ಮಾಡಿದ್ದಾರೆ.
ಇದಕ್ಕೂ ಮೊದಲು ಮಹಿಳೆಯ ಕುಟುಂಬಸ್ಥರು ಸ್ಥಳೀಯ ಜಿಲ್ಲಾಡಳಿತ ಬಳಿ ಮೋರೆ ಹೋಗಿ ಆ್ಯಂಬುಲೆನ್ಸ್ ಗಾಗಿ ಮನವಿ ಮಾಡಿದ್ದಾರೆ. ಆದರೆ ಕುಗ್ರಾಮ ಬೆಟ್ಟ-ಗುಡ್ಡದ ನಡುವೆ ಇದ್ದು, ವಾಹನ ಸಂಚಾರಕ್ಕೆ ಪೂರಕವಾಗಿಲ್ಲ. ಹೀಗಾಗಿ  ಆ್ಯಂಬುಲೆನ್ಸ್‌ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಬಳಿಕ ಕುಟುಂಬಸ್ಥರು ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದ ಸೇನೆಯ ಬಳಿ ಮೊರೆ ಮಾಡಿಕೊಂಡಿದ್ದು, ಇದಕ್ಕೆ ಕೂಡಲೇ ಸ್ಪಂದಿಸಿದ ಸೈನಿಕರು ಮಹಿಳೆಯ ನೆರವಿಗೆ ಧಾವಿಸಿದ್ದಾರೆ.
ದಂತೇವಾಡ ನಕ್ಸಲ್ ಪೀಡಿತ ಪ್ರದೇಶವಾಗಿದ್ದು, ಯಾವುದೇ ಕ್ಷಣದಲ್ಲೂ ನಕ್ಸಲರು ಯೋಧರ ಮೇಲೆ ದಾಳಿ ಮಾಡುವ ಸಾಧ್ಯತೆಗಳಿರುತ್ತವೆ. ಹೀಗಿದ್ದೂ ಜೀವದ ಹಂಗು ತೊರೆದ ಯೋಧರು ಮಹಿಳೆಯ ರಕ್ಷಣೆಗೆ ಧಾವಿಸಿದ್ದಾರೆ.ಮಹಿಳೆಯನ್ನು ಹೊತ್ತು  ಬೆಟ್ಟ-ಗುಡ್ಡ ಏರಿ ಮತ್ತು ನದಿಯನ್ನು ದಾಟಿ ಯೋಧರು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಯೋಧರ ಈ ಸಾಹಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್  ಆಗಿದ್ದು, ಸೈನಿಕರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com