ಕರು ಹತ್ಯೆ: ಪಾಪ ಪರಿಹಾರಕ್ಕೆ ಭಿಕ್ಷೆ ಬೇಡಿ, ಗಂಗಾ ಸ್ನಾನ ಮಾಡುವಂತೆ ಮಹಿಳೆಗೆ ಶಿಕ್ಷೆ ನೀಡಿದ ಪಂಚಾಯತ್!

ಕರುವೊಂದರ ಆಕಸ್ಮಿಕ ಸಾವಿಗೆ ಕಾರಣವಾದ ಮಹಿಳೆಯೊಬ್ಬರಿಗೆ ಪಾಪದ ಪರಿಹಾರಕ್ಕಾಗಿ ಗಂಗಾ ಸ್ನಾನ ಮಾಡಲು ಒಂದು ವಾರ ಭಿಕ್ಷೆ ಬೇಡಿ ಹಣ ಸಂಗ್ರಹಿಸುವಂತೆ ಮಧ್ಯಪ್ರದೇಶದ ಜಾತಿ ಪಂಚಾಯತ್ ಆದೇಶ ನೀಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಭಿಂಡ್: ಕರುವೊಂದರ ಆಕಸ್ಮಿಕ ಸಾವಿಗೆ ಕಾರಣವಾದ ಮಹಿಳೆಯೊಬ್ಬರಿಗೆ ಪಾಪದ ಪರಿಹಾರಕ್ಕಾಗಿ ಗಂಗಾ ಸ್ನಾನ ಮಾಡಲು ಒಂದು ವಾರ ಭಿಕ್ಷೆ ಬೇಡಿ ಹಣ ಸಂಗ್ರಹಿಸುವಂತೆ ಮಧ್ಯಪ್ರದೇಶದ ಜಾತಿ ಪಂಚಾಯತ್ ಆದೇಶ ನೀಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. 
ಕಮಲೇಶಿ ದೇವಿ (60) ಪಂಚಾಯತ್ ಸದಸ್ಯರು ನೀಡಿದ್ದ ಶಿಕ್ಷೆಗೆ ಗುರಿಯಾದ ಮಹಿಳೆಯಾಗಿದ್ದಾರೆ. ಮಧ್ಯಪ್ರದೇಶದ ಭಿಂಡ್ ಪಟ್ಟಣದಲ್ಲಿ ಘಟನೆ ನಡೆದಿದೆ. 
ಕರು ತನ್ನ ತಾಯಿ ಬಳಿ ಹಾಲು ಕುಡಿಯುತ್ತಿತ್ತು. ಈ ವೇಳೆ ದೇವಿ, ಕರುವನ್ನು ತಾಯಿಯಿಂದ ಪ್ರತ್ಯೇಕಗೊಳಿಸುವ ವೇಳೆ ಹಗ್ಗವನ್ನು ಬಿಗಿಯಾಗಿ ಎಳೆದಿದ್ದಾರೆ. ಪರಿಣಾಮ ಉಸಿರುಗಟ್ಟಿ ಕರು ಸಾವಿಗೀಡಾಗಿತ್ತು. 
ಪ್ರಕರಣ ಸಂಬಂಧ ಪಂಚಾಯತ್ ಸಭೆಯನ್ನು ಸೇರಿಸಲಾಗಿತ್ತು. ಈ ವೇಳೆ ಚರ್ಚೆ ನಡೆಸಿರುವ ಪಂಚಾಯತ್ ಸದಸ್ಯರು ಕಮಲೇಶಿ ದೇವಿಯವರಿಗೆ ಕೂಡಲೇ ಪಟ್ಟಣವನ್ನು ತೊರೆಯುವಂತೆ ಸೂಚಿಸಿದೆ. ಆಲ್ಲದೆ, ಪಾಪ ಪರಿಹಾರಕ್ಕಾಗಿ ನೆರೆಯ ಗ್ರಾಮಗಳಲ್ಲಿ 7 ದಿನಗಳ ಕಾಲ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ, ಬಳಿಕ ಗಂಗಾ ನದಿಯಲ್ಲಿ ಸ್ಮಾನ ಮಾಡುವಂತೆ ಆದೇಶಿಸಿದೆ ಎಂದು ತಿಳಿದುಬಂದಿದೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾರ್ಪೊರೇಟರ್ ಮುಖೇಶ್ ಗಾರ್ಗ್ ಅವರು, ಮಹಿಳೆ ವಿಧವೆಯಾಗಿದ್ದು ಪಂಚಾಯತ್ ಸದಸ್ಯರು ನೀಡಿರುವ ಶಿಕ್ಷೆ ಅಕ್ರಮ ಹಾಗೂ ಅಮಾನವೀಯವಾದದ್ದಾಗಿದೆ. ಈಗಿನ ಯುಗದಲ್ಲೂ ಈ ರೀತಿಯ ಶಿಕ್ಷೆ ನ್ಯಾಯಸಮ್ಮತವಲ್ಲ. ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು. ಪಂಚಾಯತ್ ಸದಸ್ಯರು ಶಿಕ್ಷೆ ಪ್ರಕಟಿಸುತ್ತಿದ್ದಂತೆಯೇ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. 
ಮಹಿಳೆಯ ಪುತ್ರ ಅನಿಲ್ ಶ್ರೀವಾಸ್ ಮಾತನಾಡಿ, ಕರುವನ್ನು ಹತ್ಯೆ ಮಾಡುವ ಮೂಲಕ ನನ್ನ ತಾಯಿ ತಪ್ಪು ಮಾಡಿದ್ದರು. ಜಾತಿ ಪಂಚಾಯತ್ತ ಸದಸ್ಯರು ಧರ್ಮ ಹಾಗೂ ಸಂಪ್ರದಾಯಗಳನ್ನು ಅನುಸರಿಸಿದ್ದಾರೆಂದು ತಿಳಿಸಿದ್ದಾರೆ. 
ಪೊಲೀಸ್ ಅಧೀಕ್ಷಕ ಅನಿಲ್ ಸಿಂಗ್ ಕುಶ್ವಾಹ ಮಾತನಾಡಿ, ಪ್ರಕರಣ ಸಂಬಂಧ ಈ ವರೆಗೂ ಯಾವುದೇ ದೂರುಗಳೂ ದಾಖಲಾಗಿಲ್ಲ. ಮಾಧ್ಯಮಗಳ ಮುಖಾಂತರ ಮಾಹಿತಿ ತಿಳಿಯಿತು. ಪ್ರಕರಣ ಸಂಬಂಧ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com