ಬೆದರಿಕೆಯಿದ್ದರೂ ಗೌರಿ ಲಂಕೇಶ್'ಗೇಕೆ ಕರ್ನಾಟಕ ಸರ್ಕಾರ ಭದ್ರತೆ ಕೊಟ್ಟಿರಲಿಲ್ಲ?: ರವಿಶಂಕರ್ ಪ್ರಸಾದ್

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಜೀವಕ್ಕೆ ಬೆದರಿಕೆಗಳಿದ್ದರೂ ಕರ್ನಾಟಕ ಸರ್ಕಾರವೇಕೆ ಅವರಿಗೆ ಸೂಕ್ತ ಭದ್ರತೆಯನ್ನು ಕೊಟ್ಟಿರಲಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್...
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ನವದೆಹಲಿ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಜೀವಕ್ಕೆ ಬೆದರಿಕೆಗಳಿದ್ದರೂ ಕರ್ನಾಟಕ ಸರ್ಕಾರವೇಕೆ ಅವರಿಗೆ ಸೂಕ್ತ ಭದ್ರತೆಯನ್ನು ಕೊಟ್ಟಿರಲಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಶುಕ್ರವಾರ ಪ್ರಶ್ನೆ ಮಾಡಿದ್ದಾರೆ.
ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲಿ ಆರ್'ಎಸ್ಎಸ್ ಹಾಗೂ ಬಿಜೆಪಿ ಇದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಆರೋಪ ಮಾಡುತ್ತಿರುವ ಹಿನ್ನಲೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಕ್ಸಲರಿಗೆ ಗೌರಿ ಲಂಕೇಶ್ ಅವರ ಮೇಲೆ ಕೋಪವಿತ್ತು. ಅನಾವಶ್ಯವಕಾಗಿ ಆರ್'ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಮಾತನಾಡಬಾರದು. ಗೌರಿ ಲಂಕೇಶ್ ಅವರ ಜೀವಕ್ಕೆ ಬೆದರಿಕೆಯಿದ್ದರೂ ಕರ್ನಾಟಕ ಸರ್ಕಾರವೇಕೆ ಅವರಿಗೆ ಸೂಕ್ತ ಭದ್ರತೆಯನ್ನು ಕೊಟ್ಟಿರಲಿಲ್ಲ ಎಂದು ಹೇಳಿದ್ದಾರೆ. 
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಪತ್ರಕರ್ತೆಯ ಜೀವಕ್ಕೆ ಬೆದರಿಕೆಯಿದ್ದರೂ ಅವರಿಗೆ ಭದ್ರತೆ ನೀಡುವಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಪ್ರಕರಣವನ್ನು ರಾಜಕೀಯ ಮಾಡುತ್ತಿದ್ದಾರೆ. 
ಗೌರಿ ಹತ್ಯೆಗೆ ಖಂಡನೆ ವ್ಯಕ್ತಪಡಿಸದಿರುವುದಕ್ಕೆ ಬಿಜೆಪಿ ನಾಯಕರ ವಿರುದ್ದ ಸಾಕಷ್ಟು ಟೀಕೆ ಹಾಗೂ ಆರೋಪಗಳನ್ನು ಮಾಡಲಾಗುತ್ತಿದೆ. ಪ್ರಸ್ತುತ ಬಿಜೆಪಿ ನಾಯಕರ ವಿರುದ್ದ ಟೀಕೆಗಳನ್ನು ಮಾಡುತ್ತಿರುವವರು ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಆರ್'ಎಸ್ಎಸ್ ಕಾರ್ಯಕರ್ತರ ಹತ್ಯೆ ನಡೆದಾಗ ಏಕೆ ಖಂಡನೆಗಳನ್ನು ವ್ಯಕ್ತಪಡಿಸಲಿಲ್ಲ? 
ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಅವರ ಸಹೋದರ ಇಂದ್ರಜಿತ್ ಲಂಕೇಶ್ ಅವರು ಹೇಳಿಕೆಯೊಂದನ್ನು ನೀಡಿದ್ದರು. ಸಹೋದರಿ ನಕ್ಸಲರನ್ನು ಮುಖ್ಯವಾಹಿನಿಗೆ ತರುವುದರಲ್ಲಿ ಕಾರ್ಯನಿರತರಾಗಿದ್ದರು ಎಂದು ಹೇಳಿದ್ದರು. ಗೌರಿಯವರು ರಾಜ್ಯ ಸರ್ಕಾರದ ಅನುಮತಿಯ ಮೇರೆಗೆಯೇ ಈ ಕೆಲಸವನ್ನು ಮಾಡುತ್ತಿದ್ದರೇ? ಒಂದು ವೇಳೆ ಸರ್ಕಾರ ಅನುಮತಿಯ ಮೇರೆಗೆ ಆಕೆ ಕೆಲಸ ಮಾಡುತ್ತಿದ್ದರಾದರೆ ಆಕೆಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವೇಕೆ ಭದ್ರತೆಯನ್ನು ನೀಡಿರಲಿಲ್ಲ? ಎಂದು ಪ್ರಶ್ನಿಸಿದ್ದಾರೆ. 
ಇದೇ ವೇಳೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ಅವರು, ತಾನೊಬ್ಬ ದೊಡ್ಡ ನಾಯಕನೆಂದು ಹೇಳಿಕೊಂಡು ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಆರ್'ಎಸ್ಎಸ್'ನ್ನು ದೂಷಿಸುತ್ತಿರುವ ರಾಹುಲ್ ಅವರು ತನಿಖೆ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪ್ರಕರಣದಲ್ಲಿ ಆರ್'ಎಸ್ಎಸ್ ಹಾಗೂ ಬಲಪಂಥೀಯರು ಭಾಗಿಯಾಗಿದ್ದಾರೆಂದು ಆರೋಪಿಸುತ್ತಿದ್ದಾರೆ. ಪ್ರಕರಣದಲ್ಲಿ ರಾಹುಲ್ ಅವರೇ ತೀರ್ಪನ್ನು ನೀಡಿದ್ದಾರಾದರೆ, ಪ್ರಕರಣದಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ನ್ಯಾಯ ಸಮ್ಮತವಾಗಿ ತನಿಖೆ ನಡೆಸುತ್ತದೆ ಎಂದು ನಂಬಬಹುದೇ?...
ಉದಾರ ಮೌಲ್ಯಗಳ ಕುರಿತಂದೆ ನಮಗೆ ಪಾಠ ಮಾಡಲು ಬರುತ್ತಿರುವವರು, ಹತ್ಯೆ ಪ್ರಕರಣ ಸಂಬಂಧ ಆರೋಪ ಮಾಡುತ್ತಿರುವವರು ಆರ್'ಎಸ್ಎಸ್ ನಾಯಕರ ಹತ್ಯೆಯಾದಾಗ, ಕೇರಳದಲ್ಲಿ ಬಿಜೆಪಿ ನಾಯಕರ ಹತ್ಯೆಯಾದಾಗ ಏಕೆ ಮೌನವಾಗಿದ್ದರು. ಕೇರಳ ರಾಜ್ಯದಲ್ಲಿರುವ ಆರ್'ಎಸ್ಎಸ್ ಸ್ವಯಂ ಸೇವಕರಿಗೆ ತಮ್ಮ ಸಿದ್ಧಾಂತಗಳನ್ನು ಹೊಂದುವ ಹಕ್ಕಿದೆಯೇ ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com