ಚೆನ್ನೈ: ತಮಿಳುನಾಡಿನ ಕಾಂಗ್ರೆಸ್ ನಾಯಕಿ ಜಯಂತಿ ನಟರಾಜನ್ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲದೆ ಕ್ರಿಮಿನಲ್ ಪಿತೂರಿ ಮತ್ತು ಅಧಿಕೃತ ಸ್ಥಾನದ ನಿಂದನೆ ಆರೋಪದಡಿ ಸೆಕ್ಷನ್ 120ಬಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ.
ದಾಳಿ ವೇಳೆ ಕೆಲ ದಾಖಲೆಗಳ ಪರಿಶೀಲನೆ ನಡೆಸಿರುವ ಸಿಬಿಐ ಅಧಿಕಾರಿಗಳು ಜಯಂತಿ ನಟರಾಜನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಜಯಂತಿ ಅವರು 2009ರಿಂದ 2014ರವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕೇಂದ್ರ ಪರಿಸರ ಖಾತೆ ಸಚಿವರಾಗಿದ್ದರು.
ಜಯಂತಿ ನಟರಾಜನ್ ಅಧಿಕಾರವಧಿಯಲ್ಲಿ ಜಾರ್ಖಂಡ್ ನ ಅರಣ್ಯ ಭೂಮಿಯ ಕೆಲ ಭಾಗಗಳಲ್ಲಿ ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಹಾಗೂ ಜೆಎಸ್ ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಕಂಪನಿಗಳು ಅಕ್ರಮ ಗಣಿಗಾರಿಕೆ ನಡೆಸಿದ್ದವು. ಈ ಸಂಬಂಧ ಜಯಂತಿ ಅವರು ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಲು ಸಾಥ್ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು.