ನಿನ್ನೆ ಆಶ್ರಮದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು, ಕಾರು, ನಿಷೇಧಿತ ನೋಟುಗಳು, ಪ್ಲಾಸ್ಟಿಕ್ ಕರೆನ್ಸಿ, ಕಂಪ್ಯೂಟರ್ ಗಳು, ಹಾರ್ಡ್ ಡಿಸ್ಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೆ, ಅಪ್ರಾಪ್ತ ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು.
ಇದರಂತೆ ಇಂದೂ ಕೂಡ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಡೇರಾ ಪ್ರಾಂಗಣದಲ್ಲಿ ಅಕ್ರಮವಾಗಿ ಸ್ಫೋಟ ಸಾಮಾಗ್ರಿಗಳನ್ನು ತಯಾರು ಮಾಡುವ ಕಾರ್ಖಾನೆ ಕಂಡು ಬಂದಿದೆ.
ಈ ವೇಳೆ ಸ್ಥಳದಲ್ಲಿದ್ದ ಸ್ಫೋಟಕ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಕಾರ್ಖಾನೆಯನ್ನು ಜಪ್ತಿ ಮಾಡಿದ್ದಾರೆ. ಡೇರಾ ಸಂಕೀರ್ಣದಿಂದ ಪೊಲೀಸರು ಸ್ಫೋಟಕ ತುಂಬಿರುವ ಸುಮಾರು 100ಕ್ಕೂಹೆಚ್ಚು ಪೆಟ್ಟಿಗೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ವಿಧಿವಿಜ್ಞಾನ ತಂಡದವರು ಸ್ಫೋಟಕ ವಸ್ತುಗಳ ನಮೂನೆಗಳನ್ನು ಪರೀಕ್ಷೆ ನಡೆಸುತ್ತಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾದ ಬಳಿಕ ಸ್ವಯಂ ಘೋಷಿತ ದೇವಮಾನವ ಗುರ್ಮಿತ ರಾಮ್ ರಹೀಮ್ ಸಿಂಗ್ ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಪಂಚಕುಲ ಸಿಬಿಐ ನ್ಯಾಯಾಲಯ ಸಿರ್ಸಾದ ಡೇರಾ ಆಶ್ರಮದಲ್ಲಿ ಶೋಧ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.
ತನಿಖೆ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಆಶ್ರಮದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ, ಅಲ್ಲದೆ, ಇಂಟರ್ನೆಟ್ ಸೇವೆಗಳನ್ನೂ ಸ್ಥಗಿತಗೊಳಿಸಿದ್ದಾರೆ.