
ಮುಂಬೈ: ಮೊನ್ನೆ ಬುಧವಾರ ಮುಂಬೈಯ ವಾಶಿ ರೈಲ್ವೆ ನಿಲ್ದಾಣದಲ್ಲಿ ಮೂರು ವರ್ಷದ ಮಗುವನ್ನು ವ್ಯಕ್ತಿಯೊಬ್ಬ ಅಪಹರಿಸಿ ಪನ್ವೇಲ್ ಗೆ ಹೋಗುವ ರೈಲಿನಲ್ಲಿ ಹತ್ತಿ ಹೋದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಜಿಪಿಎಸ್ ಸಹಾಯದಿಂದ ಆರೋಪಿಯನ್ನು ಪತ್ತೆಹಚ್ಚಿ ಮಗುವನ್ನು ರಕ್ಷಿಸಬಹುದೆಂದು ಮುಂಬೈ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ಮುಂದಾಗಿದೆ.
ಪನ್ವೇಲ್ ಗೆ ತೆರಳುವ ರೈಲಿನಲ್ಲಿ ಮಗುವಿನೊಂದಿಗೆ ಅಪಹರಣಕಾರ ಮಧ್ಯಾಹ್ನ 1.03 ಗಂಟೆ ಸುಮಾರಿಗೆ ಪ್ಲಾಟ್ ಫಾರ್ಮ್ 3ರಲ್ಲಿ ಹತ್ತಿ ಹೋಗಿರುವ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ವಾಶಿ ಸ್ಟೇಷನ್ ಹತ್ತಿರ ಮಗುವನ್ನು ಕುಳ್ಳಿರಿಸಿ ತಾಯಿ ವಡಾಪಾವ್ ತೆಗೆದುಕೊಳ್ಳಲೆಂದು ಆಚೆ ಹೋಗಿದ್ದಳು. ಮತ್ತೆ ಬಂದು ನೋಡುವಾಗ ಮಗು ಅಲ್ಲಿ ಇರಲಿಲ್ಲ. ತಕ್ಷಣವೇ ಆಕೆ ಪೊಲೀಸರಿಗೆ ಮಾಹಿತಿ ನೀಡಿದಳು.
ಪೊಲೀಸರು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿ ನೋಡಿದಾಗ ಅಪಹರಣಕಾರ ಮಗುವಿನೊಂದಿಗೆ ಪನ್ವೇಲ್ ಗೆ ತೆರಳುವ ರೈಲಿನಲ್ಲಿ ಹೋಗುತ್ತಿರುವುದು ಪತ್ತೆಯಾಗಿದೆ.
ಮಗುವಿನ ಅಪಹರಣ ಕೇಸು ದಾಖಲಿಸಿ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Advertisement