ಗುರುಗ್ರಾಮ ವಿದ್ಯಾರ್ಥಿ ಹತ್ಯೆ: ಶಾಲೆ ಮಾಲೀಕರ ವಿರುದ್ಧ ಪ್ರಕರಣ ದಾಖಲು!

ರ‍್ಯಾನ್ ಇಂಟರ್'ನ್ಯಾಷನಲ್ ಶಾಲಾ ಬಾಲಕನ ಹತ್ಯೆ ಪ್ರಕರಣ ಸಂಬಂಧ ಶಾಲೆಯ ಮಾಲೀಕರ ವಿರುದ್ಧ ಮಕ್ಕಳ ರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ನವದೆಹಲಿ: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಗುರುಗ್ರಾಮದ ರ‍್ಯಾನ್ ಇಂಟರ್'ನ್ಯಾಷನಲ್ ಶಾಲಾ ಬಾಲಕನ ಹತ್ಯೆ ಪ್ರಕರಣ ಸಂಬಂಧ ಶಾಲೆಯ ಮಾಲೀಕರ ವಿರುದ್ಧ ಮಕ್ಕಳ ರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ  ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ವಿದ್ಯಾರ್ಥಿ ಹತ್ಯೆಯನ್ನು ಖಂಡಿಸಿ ಗುರುಗ್ರಾಮದಲ್ಲಿ ವಿದ್ಯಾರ್ಥಿಗಳ ಪೋಷಕರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆಯೇ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ  ಅವರು, "ಬಾಲಕನ ಹತ್ಯೆ ಪ್ರಕರಣದಲ್ಲಿ ಶಾಲೆಯ ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯವನ್ನು ನಾವು ಒಪ್ಪಿಕೊಳ್ಳುತ್ತೇವೆ. ಶಾಲೆಗೆ ಬಂದ ಮಕ್ಕಳ ರಕ್ಷಣೆ ಶಾಲಾ ಸಿಬ್ಬಂದಿಗಳದ್ದೇ ಆಗಿರುತ್ತದೆ. 1200 ಮಕ್ಕಳಿರುವ  ಶಾಲೆಯಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸದಿರುವುದು ಎದ್ದುಕಾಣುತ್ತಿದೆ. ಹೀಗಾಗಿ ಪೊಲೀಸರಿಗೆ ಶಾಲೆಯ ಮಾಲೀಕರ ವಿರುದ್ಧ ಮಕ್ಕಳ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅದರಂತೆ ರ‍್ಯಾನ್ ಇಂಟರ್'ನ್ಯಾಷನಲ್ ಶಾಲೆಯ ಮಾಲೀಕರಾದ ಆಲ್ಬರ್ಟ್ ಪಿಂಟೋ ಮತ್ತು ಅವರ ಸಿಬ್ಬಂದಿಗಳ ವಿರುದ್ಧ ಮಕ್ಕಳ ರಕ್ಷಣಾ ಕಾಯ್ದೆ 2015ರ ಸೆಕ್ಷನ್ 75ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಂತೆಯೇ ಇನ್ನು 7  ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸುವಂತೆ ಪೋಷಕರ ಆಗ್ರಹ
ಇನ್ನು ಬಾಲಕನ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪ್ರತಿಭಟನಾ ನಿರತ ಪೋಷಕರು ಆಗ್ರಹಿಸಿದ್ದಾರೆ. ಈಗಾಗಲೇ ಗುರುಗ್ರಾಮದಲ್ಲಿ ಬಾಲಕನ ಹತ್ಯೆ ಖಂಡಿಸಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ದೇಶಾದ್ಯಂತ  ಕೃತ್ಯವನ್ನು ಖಂಡಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com