ಲಕ್ನೋ: ಪತ್ರಕರ್ತರ ಸಮ್ಮುಖದಲ್ಲೆ ಸಾರ್ವಜನಿಕವಾಗಿ ಮುಸ್ಲಿಂ ಮಹಿಳೆಯೊಬ್ಬರು ಗಂಡನಿಗೆ ವಿಚ್ಛೇದನ(ಖುಲಾ) ನೀಡಿದ ಘಟನೆ ನಡೆದಿದೆ.
35 ವರ್ಷದ ಶಾಜದಾ ಖಾಟೂನ್ ಅವರು ಜುಬೇರ್ ಅಲಿ ಎಂಬುವರನ್ನು 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಶಾಜದಾ ಅವರು ಶಿಕ್ಷಕಿ. ಜುಬೇರ್ ಅವರು ಗ್ರಾಹಕರ ಸರಕು ಕೇಂದ್ರದಲ್ಲಿ ಕೆಲಸದಲ್ಲಿದ್ದಾರೆ.
ಮುಸ್ಲಿಂ ಪದ್ಧತಿಯ ನಿಯಾಮವಳಿಗಳ ಪ್ರಕಾರ ವಿಚ್ಛೇದನ ನೀಡಲು ಸಾಧ್ಯವಾಗದ ಕಾರಣ ಪತ್ರಕರ್ತರ ಸಮ್ಮುಖದಲ್ಲೆ ಪತ್ರಕ್ಕೆ ಸಹಿ ಮಾಡಿ ಕೊಡುವುದರ ಮೂಲಕ ವಿಚ್ಛೇದನ ನೀಡಿದ್ದಾರೆ.
18 ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಶಾಜದಾ ಬಹಳ ಹಿಂದೆಯೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ, ನನಗೆ ವಿಚ್ಛೇದನ ದೊರೆಯಲಿಲ್ಲ. ಹಾಗಾಗಿ, ನಾನು ಸಾರ್ವಜನಿಕವಾಗಿ ಪತ್ರಕ್ಕೆ ಸಹಿ ಮಾಡಿ ನೋಟಿಸ್ ನೀಡಿದ್ದೇನೆ ಎಂದು ಹೇಳಿದ್ದಾರೆ.
ನಾನು ಈಗಾಗಲೇ ಇದ್ಧತ್ ಪ್ರವೇಶಿಸುತ್ತಿದ್ದೇನೆ, ಇದ್ಧತ್ ನಂತರ ತಮ್ಮ ಮದುವೆ ಸಂಬಂಧ ಕೊನೆಗೊಳ್ಳುತ್ತದೆ. ಹೀಗಾಗಿ ವಿಚ್ಛೇದನಕ್ಕಾಗಿ ಧರ್ಮ ಗುರುಗಳ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ,
ಆದರೆ ಶಾಜದಾ ನಿರ್ಧಾರವನ್ನು ಧರ್ಮ ಗುರುಗಳು ತಿರಸ್ಕರಿಸಿದ್ದಾರೆ. ವಿಚ್ಛೇದನವನ್ನು ಕೇವಲ ಒಂದು ಪತ್ರದ ಮೂಲಕ ನೀಡಲು ಸಾಧ್ಯವಿಲ್ಲ. ಮಹಿಳೆ ಕಳುಹಿಸಿದ ಮೂರು ವಿಚ್ಛೇದನಾ ಪತ್ರಕ್ಕೂ ಗಂಡನಿಂದ ಉತ್ತರ ಬಾರದೆ ಇದ್ದಲ್ಲಿ ಮಾತ್ರ ವಿಚ್ಛೇದನಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.