ನಾಗ್ಪುರ: ನಡವಳಿಕೆ ಹಾಗೂ ವರ್ತನೆಗಳನ್ನು ನೋಡಿ ಯಾರನ್ನು ನಂಬಬೇಕು ಹಾಗೂ ನಂಬಬಾರದು ಎಂಬುದನ್ನು ಜನರೇ ನಿರ್ಧರಿಸಬೇಕು ಎಂದು ಯೋಗ ಗುರು ಬಾಬಾ ರಾಮ್'ದೇವ್ ಅವರು ಮಂಗಳವಾರ ಹೇಳಿದ್ದಾರೆ.
ಅಸಾರಾಂ ಬಾಪು, ಗುರ್ಮಿತ್ ರಾಮ್ ರಹೀಮ್ ಸಿಂಗ್, ರಾಧೇ ಮಾ, ನಿತ್ಯಾನಂದ ಪ್ರಕರಣಗಳು ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಹಿನ್ನಲೆಯಲ್ಲಿ ಸಂತರ ಉನ್ನತ ಸಂಘಟನೆಯಾಗಿರುವ ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ) ನಕಲಿ ಬಾಬಾಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಾಬಾ ರಾಮ್ ದೇವ್ ಅವರು, ಬಾಬಾಗಳ ವರ್ತನೆಗಳು ಹಾಗೂ ನಡವಳಿಕೆಗಳನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಅವರ ಉದ್ದೇಶಗಳೇನಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಕರ್ಮಗಳನ್ನು ನಾವು ನಂಬುವುದಾದರೆ, ಯಾವುದೇ ನಕಲಿ ಬಾಬಾಗಳು ಯಾರ ಮೇಲೂ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತದ ಸಂಸ್ಕೃತಿ ಅತ್ಯಂತ ಪುರಾತನದ್ದು. ಶುದ್ಧತೆ, ದೈವಿಕ ಜ್ಞಾನವನ್ನು ಹೊಂದಿರುವ ಸಾಕಷ್ಟು ಸಂಸತರಿದ್ದಾರೆ. ಇಡೀ ವಿಶ್ವ ಇಂತಹವರಿಂದ ಪಾಠವನ್ನು ಕಲಿತು, ಇಂತಹವರ ಮೇಲೆ ನಂಬಿಕೆಯನ್ನು ಇಡಬೇಕು ಎಂದು ತಿಳಿಸಿದ್ದಾರೆ.